
ನವದೆಹಲಿ: ಶಬರಿಮಲೆ ದೇಗುಲದ ಚಿನ್ನ ನಾಪತ್ತೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕೇರಳ, ಕರ್ನಾಟಕ, ತಮಿಳುನಾಡಿನ 21 ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿ ಅವರ ನಿವಾಸ, ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರ ನಿವಾಸ ಮತ್ತು ಕೆಲ ಆಭರಣ ಮಳಿಗೆಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದರು.
ಕೇರಳ ಪೊಲೀಸರು ದಾಖಲಿಸಿರುವ ಹಲವಾರು ಎಫ್‌ಐಆರ್‌ಗಳನ್ನು ಪರಿಗಣಿಸಿ ಜನವರಿ 9ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿಕೊಂಡಿದ್ದರು.
ರಾಜಕೀಯವಾಗಿ ಮಹತ್ವ ಪಡೆದಿರುವ ಈ ಪ್ರಕರಣವನ್ನು ಕೇರಳ ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ.
ಈ ತನಿಖೆಯು ಅಧಿಕಾರಿಗಳ ದುಷ್ಕೃತ್ಯ, ಆಡಳಿತಾತ್ಮಕ ಲೋಪಗಳು, ಅಯ್ಯಪ್ಪ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚಗಳು ಮತ್ತು ಶ್ರೀಕೋವಿಲ್ ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಳವು ಮಾಡಲು ನಡೆಸಿರುವ ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವಾರು ಅಕ್ರಮಗಳಿಗೆ ಸಂಬಂಧಿಸಿದೆ.
‘2019 ಮತ್ತು 2025ರ ನಡುವೆ ಅಧಿಕೃತ ದಾಖಲೆಗಳಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚಗಳನ್ನು ಉದ್ದೇಶಪೂರ್ವಕವಾಗಿ ತಾಮ್ರದ ತಟ್ಟೆಗಳು ಎಂದು ತಪ್ಪಾಗಿ ನಮೂದಿಸಲಾಗಿದೆ. ದೇವಾಲಯದ ಆವರಣದಿಂದ ಇವುಗಳನ್ನು ಕಾನೂನುಬಾಹಿರವಾಗಿ ತೆಗೆದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ’ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
‘ಚೆನ್ನೈ ಮತ್ತು ಕರ್ನಾಟಕದಲ್ಲಿ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಚಿನ್ನವನ್ನು ಹೊರತೆಗೆಯಲಾಗಿದೆ. ಅಕ್ರಮ ಹಣವನ್ನು ಪತ್ತೆ ಹಚ್ಚುವುದು, ಅಪರಾಧಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳುವುದು ಈ ಶೋಧಗಳ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.