ಶಬರಿಮಲೆ ದೇಗುಲ
–ಪಿಟಿಐ ಚಿತ್ರ
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಬಂಗಾರ ಕಳವು ಪ್ರಕರಣ ಸಂಬಂಧ, ಓರ್ವ ಸಿಪಿಎಂ ನಾಯಕ ಹಾಗೂ ಎಡರಂಗದ ಕೆಲವು ನಾಯಕರು ಸೇರಿ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಬಿಡಿ)ನ ಮಾಜಿ ಸದಸ್ಯರು ವಿಚಾರಣೆ ಎದುರಿಸುವ ಸಾಧ್ಯತೆ ಇದೆ.
ದೇವಸ್ವಂ ಬೋರ್ಡ್‌ನ ಮಾಜಿ ಅಧ್ಯಕ್ಷರೂ ಆಗಿರುವ ಸಿಪಿಎಂ ನಾಯಕ ಎ. ಪದ್ಮಕುಮಾರ್ ಅವರು ದೇಗುಲದ ಚಿನ್ನವನ್ನು ಲೇಪನಕ್ಕಾಗಿ ಬೆಂಗಳೂರು ಮೂಲಕ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಎಂಬವರಿಗೆ ಚೆನ್ನೈನಲ್ಲಿ ಹಸ್ತಾಂತರಿಸಿದ್ದರು. ನಿಯಮಗಳ ಪ್ರಕಾರ ಇದನ್ನು ದೇಗುಲದ ಆವರಣದಲ್ಲಿಯೇ ಮಾಡಬೇಕು ಎಂದು ಟಿಡಿಬಿಯ ಕಣ್ಗಾವಲು ವಿಭಾಗದ ವರದಿಯಲ್ಲಿ ಹೇಳಲಾಗಿದೆ.
ಹೈಕೋರ್ಟ್ ನೇಮಕ ಮಾಡಿದ ವಿಶೇಷ ತನಿಖಾ ದಳ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಟಿಡಿಬಿಯ ಕಣ್ಗಾವಲು ವಿಭಾಗದ ವರದಿ ಆದರಿಸಿ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿದೆ. ಹೀಗಾಗಿ ಬೋರ್ಡ್‌ನ ಮಾಜಿ ಸದಸ್ಯರು ತನಿಖೆ ಎದುರಿಸುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪದ್ಮಕುಮಾರ್, ‘ನಾನು ಯಾವುದೇ ಕಾನೂನು ಬಾಹಿರ ಕೃತ್ಯ ಮಾಡಿಲ್ಲ. ಯಾವುದೇ ತನಿಖೆ ಎದುರಿಸಲು ಸಿದ್ಧ’ ಎಂದು ಹೇಳಿದ್ದಾರೆ. ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಹಾಗೂ ಬೋರ್ಡ್‌ನ ಕೆಲವು ಸದಸ್ಯರು ನನ್ನನ್ನು ಗುರಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ಚಿನ್ನ ಕಳವು ಪ್ರಕರಣ ವಿವಾದ ತಾರಕಕ್ಕೇರುತ್ತಿದೆ. ವಿರೋಧ ಪಕ್ಷ ಕಾಂಗ್ರೆಸ್, ಸಂಘಪರಿವಾರ ಮತ್ತು ಬಿಜೆಪಿ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಶಬರಿಮಲೆ ದೇಗುಲದಲ್ಲಿ ಭಾರಿ ಲೂಟಿ ನಡೆದಿದೆ ಎಂದು ಸಂಸ್ಕೃತಿ ಸಚಿವ ಸಜಿ ಚೆರಿಯನ್ ಆರೋಪಿಸಿದ್ದಾರೆ. ಕಾಂಗ್ರೆಸ್ ಇದಕ್ಕೆ ತಿರುಗೇಟು ನೀಡಿದ್ದು, ರಾಜ್ಯದ ಎಲ್ಲಾ ದೇಗುಲಗಳನ್ನು ಆಡಿಟ್ ಮಾಡಬೇಕು ಎಂದು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.