ನಟ ಜಯರಾಮ್
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನಗಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಖ್ಯಾತ ನಟ ಜಯರಾಮ್ ಅವರನ್ನು ವಿಚಾರಣೆಗೆ ಒಳಪಡಿಸಿವೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಚಿನ್ನಗಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟಿ ಅವರೊಂದಿಗೆ ಎಷ್ಟು ಬಾರಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ, ಅವರಿಬ್ಬರ ನಡುವೆ ಹಣಕಾಸಿನ ವ್ಯವಹಾರ ನಡೆದಿದೆಯಾ ಎನ್ನುವುದರ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಚೆನ್ನೈನಲ್ಲಿರುವ ಜಯರಾಮ್ ಅವರ ನಿವಾಸದಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ.
2019ರಲ್ಲಿ ಉನ್ನಿಕೃಷ್ಣನ್ ಪೋಟಿ ಚೆನ್ನೈನಲ್ಲಿ ಸಂಘಟಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಜಯರಾಮ್ ಭಾಗಿಯಾದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಾದ ಬಳಿಕ ಎಸ್‌ಐಟಿ ಅವರನ್ನು ವಿಚಾರಣೆಗೊಳಪಡಿಸಿದೆ.
ಪ್ರಕರಣ ಸಂಬಂಧ ಟ್ರಾವಂಕೂರ್ ದೇವಸ್ವಂ ಬೋರ್ಡ್‌ನ (ಟಿಡಿಬಿ) ಮಾಜಿ ಅಧಿಕಾರಿಗಳಾದ ಬಿ. ಮುರಳಿ ಬಾಬು ಹಾಗೂ ಎಸ್. ಶ್ರೀಕುಮಾರ್ ಎಸ್‌ಐಟಿ ಬಂಧಿಸಿತ್ತು. ಇತ್ತೀಚೆಗಷ್ಟೇ ಅವರು ಜಾಮೀನು ಪಡೆದುಕೊಂಡಿದ್ದರು.
ನಿಗದಿತ 90 ದಿನದೊಳಗೆ ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರು ವಿಫಲರಾಗಿದ್ದರಿಂದ ಜಾಮೀನು ಲಭಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.