ADVERTISEMENT

ಶಬರಿಮಲೆ ಚಿನ್ನ ಕಳವು: ಕೇರಳ ವಿಧಾನಸಭೆಯಲ್ಲಿ ಆಡಳಿತ–ಪ್ರತಿಪಕ್ಷಗಳ ನಾಯಕರ ವಾಕ್ಸಮರ

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಬಂಧನಕ್ಕೆ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಒತ್ತಾಯ

ಪಿಟಿಐ
Published 22 ಜನವರಿ 2026, 13:35 IST
Last Updated 22 ಜನವರಿ 2026, 13:35 IST
<div class="paragraphs"><p>ದೇವಸ್ವಂ ಸಚಿವ ವಿ.ಎನ್‌. ವಾಸವನ್‌ ರಾಜೀನಾಮೆಗೆ ಒತ್ತಾಯಿಸಿ ತಿರುವನಂತಪುರದ ‘ನಿಯಮಸಭಾ’ ಬಳಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು </p></div>

ದೇವಸ್ವಂ ಸಚಿವ ವಿ.ಎನ್‌. ವಾಸವನ್‌ ರಾಜೀನಾಮೆಗೆ ಒತ್ತಾಯಿಸಿ ತಿರುವನಂತಪುರದ ‘ನಿಯಮಸಭಾ’ ಬಳಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು

   

–ಪಿಟಿಐ ಚಿತ್ರ

ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ ಗುರುವಾರ ನಡೆದ ಕಲಾಪದ ವೇಳೆ ಶಬರಿಮಲೆ ಚಿನ್ನದ ಕಳವು ಪ್ರಕರಣವು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ, ಗದ್ದಲಕ್ಕೆ ಕಾರಣವಾಯಿತು.

ADVERTISEMENT

ವಿರೋಧ ಪಕ್ಷವಾದ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ನ (ಯುಡಿಎಫ್‌) ಶಾಸಕರು ಕಲಾಪಕ್ಕೆ ಅಡ್ಡಿಪಡಿಸಿದರೆ, ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಶಾಸಕರು ಹಾಗೂ ಸಚಿವರು, ಈ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೋಟಿ ಅವರು ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಬಗ್ಗೆ ಪ್ರಸ್ತಾಪಿಸುವ ಮೂಲಕ ತಿರುಗೇಟು ನೀಡಿದರು.

ಅಧಿವೇಶನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಈ ವಿಷಯ ಪ್ರಸ್ತಾಪಿಸಿ, ದೇವಸ್ವಂ ಸಚಿವ ವಿ.ಎನ್‌. ವಾಸವನ್‌ ಅವರ ರಾಜೀನಾಮೆಗೆ ಒತ್ತಾಯಿಸಿದರು. ನಂತರ, ವಿರೋಧ ಪಕ್ಷದ ಶಾಸಕರು ಬ್ಯಾನರ್‌ಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಭಾಧ್ಯಕ್ಷರ ಪೀಠದ ಎದುರಿಗೆ ಧಾವಿಸಿದರು.

‘ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೋಟಿ ಅವರು ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಸಂಸದರೊಂದಿಗೆ ಸಂಪರ್ಕ ಹೊಂದಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಸದನದಲ್ಲಿ ಚರ್ಚೆಯ ಹಾದಿಯನ್ನು ತಪ್ಪಿಸಲು ಯುಡಿಎಫ್‌ ಪ್ರಯತ್ನಿಸುತ್ತಿದೆ’ ಎಂದು ಸಂಸದೀಯ ಸಚಿವ ಎಂ.ಬಿ. ರಾಜೇಶ್‌ ಆರೋಪಿಸಿದರು.

‘ಪೋಟಿ ಅವರು ಸೋನಿಯಾ ಗಾಂಧಿ ಅವರಿಗೆ ಬಂಗಾರದ ಬಳೆಯನ್ನು ಉಡುಗೊರೆಯಾಗಿ ನೀಡಿದ್ದಾರೆ’ ಎಂದು ಸಿಪಿಎಂ ಶಾಸಕಿ ಕೆ.ಕೆ. ಶೈಲಜಾ ಆರೋಪಿಸಿದರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಶಾಸಕರು, ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಅವರು ಪೋಟಿ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಇರುವ ಚಿತ್ರವನ್ನು ಪ್ರದರ್ಶಿಸಿದರು.

ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿದ್ದರಿಂದ ಸಭಾಧ್ಯಕ್ಷ ಎ.ಎನ್‌.ಶಂಶೀರ್‌ ಅವರು ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು. ನಂತರ, ವಿರೋಧ ಪಕ್ಷದವರು ಸದನದ ಪ್ರವೇಶ ದ್ವಾರದಲ್ಲಿ ಧರಣಿ ನಡೆಸಿದರು.

ದೇವಸ್ವಂ ಸಚಿವ ವಿ.ಎನ್‌. ವಾಸವನ್‌ ರಾಜೀನಾಮೆಗೆ ಒತ್ತಾಯಿಸಿ ತಿರುವನಂತಪುರದ ‘ನಿಯಮಸಭಾ’ ಬಳಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು

ಶಬರಿಮಲೆಯಿಂದ ನಾಪತ್ತೆಯಾಗಿರುವ ಚಿನ್ನವನ್ನು ಪೋಟಿ ಅವರು ಸೋನಿಯಾ ಗಾಂಧಿ ಅವರಿಗೆ ಮಾರಾಟ ಮಾಡಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು.
– ವಿ. ಶಿವನ್‌ಕುಟ್ಟಿ, ಶಿಕ್ಷಣ ಸಚಿವ
‘ಸಚಿವರ ಅವಹೇಳನಕಾರಿ ಹೇಳಿಕೆ ಕಡತದಿಂದ ತೆಗೆಯಿರಿ’
‘ಸೋನಿಯಾ ಗಾಂಧಿ ಅವರ ವಿರುದ್ಧ ಸಚಿವರಾದ ಎಂ.ಬಿ. ರಾಜೇಶ್‌ ವಿ.ಶಿವನ್‌ಕುಟ್ಟಿ ಹಾಗೂ ವೀಣಾ ಜಾರ್ಜ್‌ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಹಾಗೂ ಆರೋಪಗಳನ್ನು ಕಡತದಿಂದ ತೆಗೆಯಬೇಕು’ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌ ಅವರು ಸಭಾಧ್ಯಕ್ಷ ಎ.ಎನ್‌. ಶಂಶೀರ್‌ ಅವರನ್ನು ಒತ್ತಾಯಿಸಿದ್ದಾರೆ.