ADVERTISEMENT

ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣ: ಹೈಕೋರ್ಟ್‌ಗೆ SIT ಮೊದಲ ವರದಿ ಸಲ್ಲಿಕೆ

ಪಿಟಿಐ
Published 21 ಅಕ್ಟೋಬರ್ 2025, 16:13 IST
Last Updated 21 ಅಕ್ಟೋಬರ್ 2025, 16:13 IST
ಶಬರಿಮಲೆ ದೇವಸ್ಥಾನ (ಸಾಂದರ್ಭಿಕ ಚಿತ್ರ)
ಶಬರಿಮಲೆ ದೇವಸ್ಥಾನ (ಸಾಂದರ್ಭಿಕ ಚಿತ್ರ)   

ಕೊಚ್ಚಿ: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ತನ್ನ ಮೊದಲ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೇರಳ ಹೈಕೋರ್ಟ್‌ಗೆ ಮಂಗಳವಾರ ಸಲ್ಲಿಸಿದೆ.

ನ್ಯಾಯಮೂರ್ತಿಗಳಾದ ರಾಜ ವಿಜಯರಾಘವನ್‌ ಹಾಗೂ ಕೆ.ವಿ. ಜಯಕುಮಾರ್‌ ಅವರನ್ನೊಳಗೊಂಡ ಪೀಠದ ಮುಂದೆ ವರದಿಯನ್ನು ಸಲ್ಲಿಸಲಾಯಿತು.

‘ಎಸ್‌ಐಟಿ ತನಿಖೆಯ ಪ್ರಸ್ತುತ ಸ್ಥಿತಿಯನ್ನು ವರದಿಯಲ್ಲಿ ವಿವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದ ಹೈಕೋರ್ಟ್‌, ಎರಡು ವಾರದೊಳಗೆ ಪ್ರಗತಿ ವರದಿ ಸಲ್ಲಿಸಬೇಕು. ಆರು ವಾರಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿತ್ತು.

ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾದ ಪ್ರಕರಣದ ತನಿಖೆ ನಡೆಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಜಾಗೃತ ದಳಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಈ ಪ್ರಕರಣದಲ್ಲಿ ದೇವಸ್ವಂ ಅಧಿಕಾರಿಗಳ ಲೋಪ ಇರುವುದನ್ನು ಜಾಗೃತಿ ದಳದ ವರದಿಯಲ್ಲಿ ತಿಳಿಸಲಾಗಿತ್ತು. ಹೀಗಾಗಿ, ಕ್ರಿಮಿನಲ್‌ ಪ್ರಕರಣ ದಾಖಲಿಸಲು ಹಾಗೂ ಎಸ್‌ಐಟಿ ತನಿಖೆ ನಡೆಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಎಸ್‌ಐಟಿಯು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಬೆಂಗಳೂರು ಉದ್ಯಮಿ ಉನ್ನಿಕೃಷ್ಣನ್‌ ಪೋಟಿ ಹಾಗೂ ದೇವಸ್ವಂ ಮಂಡಳಿಯ ಕೆಲ ಅಧಿಕಾರಿಗಳು ಸೇರಿದಂತೆ 10 ಮಂದಿ ಆರೋಪಿಗಳನ್ನಾಗಿ ಮಾಡಲಾಗಿದೆ.

ಬೆಂಗಳೂರಿನ ಇನ್ನೂ ಮೂವರು ಭಾಗಿ

ಚಿನ್ನ ನಾಪತ್ತೆ ಪ್ರಕರಣದಲ್ಲಿ ಉದ್ಯಮಿ ಉನ್ನಿಕೃಷ್ಣನ್‌ ಪೋಟಿ ಅವರಲ್ಲದೆ ಬೆಂಗಳೂರಿನ ಇನ್ನೂ ಮೂವರು ಭಾಗಿಯಾಗಿರುವುದನ್ನು ಎಸ್‌ಐಟಿ ಪತ್ತೆ ಮಾಡಿದೆ. ಪೋಟಿ ಪರವಾಗಿ ಬೆಂಗಳೂರಿನ ಅನಂತಸುಬ್ರಹ್ಮಣ್ಯಂ ಹಾಗೂ ರಮೇಶ್‌ ಅವರು ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳನ್ನು ಸಂಗ್ರಹಿಸಿದ್ದಾರೆ. ಚೆನ್ನೈನ ಸ್ಮಾರ್ಟ್‌ ಕ್ರಿಯೇಷನ್ಸ್‌ ಈ ಮೂರ್ತಿಗಳಿಂದ ತೆಗೆದ ಚಿನ್ನವನ್ನು ಕಲ್ಲೇಶ್‌ ಎಂಬವರು ಸಂಗ್ರಹಿಸಿರುವುದನ್ನು ಎಸ್‌ಐಟಿ ಪತ್ತೆ ಮಾಡಿದೆ. ಈ ಮೂವರು ಪೋಟಿ ಅವರ ಸಹಚರರಾಗಿದ್ದಾರೆ.  ಎಸ್‌ಐಟಿ ಪೋಟಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಪೋಟಿ ಅವರ ಪಾತ್ರ ಕಡಿಮೆ ಇದ್ದು ಅವರು ಪ್ರಮುಖ ಸಂಚುಕೋರರ ಸೂಚನೆ ಮೇರೆಗೆ ಕಾರ್ಯ ನಿರ್ವಹಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.  ತಾಮ್ರದ ಮೂರ್ತಿಗಳಿಂದ ಕಳವು ಮಾಡಿದ ಸುಮಾರು ಎರಡು ಕೆ.ಜಿ.ಯಷ್ಟು ಚಿನ್ನವನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಮೌಲ್ಯಕ್ಕೆ ಶ್ರೀಮಂತ ಭಕ್ತರಿಗೆ ಮಾರಾಟ ಮಾಡಲಾಗಿದೆ ಎಂದು ಎಸ್‌ಐಟಿ ಶಂಕಿಸಿದೆ. ಈ ಚಿನ್ನವನ್ನು ವಶಕ್ಕೆ ಪಡೆಯುವುದು ಎಸ್‌ಐಟಿಗೆ ಸವಾಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯ ಕೆಲ ಅಧಿಕಾರಿಗಳನ್ನು ಶೀಘ್ರದಲ್ಲೇ ಎಸ್‌ಐಟಿ ವಿಚಾರಣೆ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.