ADVERTISEMENT

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣ: ಮುಖ್ಯ ಅರ್ಚಕ ಬಂಧನ 

ಪಿಟಿಐ
Published 15 ಜನವರಿ 2026, 16:09 IST
Last Updated 15 ಜನವರಿ 2026, 16:09 IST
Sabarimala 
Sabarimala    

ತಿರುವನಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವಿಗೆ ಸಂಬಂಧಿಸಿದ ಎರಡನೆಯ ಪ್ರಕರಣದಲ್ಲಿ, ಮುಖ್ಯ ಅರ್ಚಕ ಕಂಡರಾರು ರಾಜೀವರು ಅವರನ್ನು ವಿಶೇಷ ತನಿಖಾ ದಳವು (ಎಸ್‌ಐಟಿ) ಗುರುವಾರ ಬಂಧಿಸಿದೆ. 

ದೇವಸ್ಥಾನದ ‘ಶ್ರೀಕೋವಿಲ್‌’ನ ಬಾಗಿಲ ಚೌಕಟ್ಟಿನ ಚಿನ್ನದ ತೂಕ ಕಡಿಮೆಯಾಗಿರುವ ಪ್ರಕರಣದಲ್ಲಿ ಕಂಡರಾರು ರಾಜೀವರು ಈಗಾಗಲೇ  ಬಂಧನದಲ್ಲಿದ್ದು, ಸದ್ಯ ಅವರು ತಿರುವನಂತಪುರದ ವಿಶೇಷ ಉಪ ಕಾರಾಗೃಹದಲ್ಲಿದ್ದಾರೆ. 

ಕೊಲ್ಲಂ ವಿಜಿಲೆನ್ಸ್‌ ಕೋರ್ಟ್‌ನಿಂದ ಅನುಮತಿ ಪಡೆದುಕೊಂಡ ಎಸ್‌ಐಟಿ ತಂಡವು ಗುರುವಾರ ಜೈಲಿಗೆ ತೆರಳಿ, ಎರಡನೆಯ ಪ್ರಕರಣವಾದ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ತಾಮ್ರದ ಕವಚಕ್ಕೆ ಲೇಪಿಸಿದ್ದ ಚಿನ್ನ ಕಳವು ಪ್ರಕರಣದಲ್ಲಿ ಕಂಡರಾರು ಅವರ ಬಂಧನವನ್ನು ದಾಖಲಿಸಿತು. ತನಿಖಾ ತಂಡವು ರಾಜೀವರು ಅವರನ್ನು ಕಸ್ಟಡಿಗೆ ಪಡೆಯಲು ಶೀಘ್ರದಲ್ಲೇ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ. 

ADVERTISEMENT

ಶಂಕರದಾಸ್‌ ರಿಮಾಂಡ್‌ ಪ್ರಕ್ರಿಯೆ: ಟಿಡಿಬಿಯ ಮಾಜಿ ಸದಸ್ಯ ಕೆ.ಪಿ ಶಂಕರದಾಸ್‌ ಅವರ ರಿಮಾಂಡ್‌ ಪ್ರಕ್ರಿಯೆ ಪೂರ್ಣಗೊಳಿಸುವ ಭಾಗವಾಗಿ ವಿಜಿಲೆನ್ಸ್‌ ಕೋರ್ಟ್‌ನ ನ್ಯಾಯಾಧೀಶ ಸಿ.ಎಸ್‌. ಮೋಹಿತ್‌ ಅವರು ಇಲ್ಲಿನ ಖಾಸಗಿ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದರು. ದಾಸ್ ಅವರು ಶ್ರೀಕೋವಿಲ್‌ನ ಚಿನ್ನ ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಎಸ್‌ಐಟಿ ಬುಧವಾರ ಅವರನ್ನು ಬಂಧಿಸಿತ್ತು. ಪುತ್ರ ಐಪಿಎಸ್‌ ಅಧಿಕಾರಿ ಆಗಿರುವುದರಿಂದ ಕೆ.ಪಿ ಶಂಕರದಾಸ್‌ ಅವರನ್ನು ಬಂಧಿಸಲು ಎಸ್‌ಐಟಿ ಹಿಂಜರಿಯುತ್ತಿದೆಯೇ ಎಂದು ಕೋರ್ಟ್‌ ಇತ್ತೀಚೆಗೆ ಪ್ರಶ್ನಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.