ADVERTISEMENT

ಶಬರಿಮಲೆ | ಮಹಿಳೆಯರ ದೇಗುಲ ಪ್ರವೇಶ: ಟಿಡಿಬಿ ವಿರೋಧ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 16:10 IST
Last Updated 2 ಮಾರ್ಚ್ 2026, 16:10 IST
ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ   

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದನ್ನು ವಿರೋಧಿಸಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.

‘ದೇವಾಲಯಗಳು, ಅದರ ನಂಬಿಕೆ ಹಾಗೂ ಪದ್ಧತಿಗಳನ್ನು ರಕ್ಷಿಸಲು ಮಂಡಳಿಯು ಬದ್ಧವಾಗಿದೆ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ.

‘10ರಿಂದ 50 ವರ್ಷದ ಒಳಗಿನ ಮಹಿಳೆಯರ ಪ್ರವೇಶ ನಿಷೇಧವನ್ನು ಮುಂದುವರಿಸಬೇಕು ಎಂದು ಸೋಮವಾರ ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮಂಡಳಿಯು ತನ್ನ ಈ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಋತುಸ್ರಾವ ಆಗುವ ವಯಸ್ಸಿನ ಮಹಿಳೆಯರಿಗೆ ಕೂಡ ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ 2018ರ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತ್ತು.

ಈ ತೀರ್ಪಿಗೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಗಳು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಪರಿಗಣನೆಯಲ್ಲಿದ್ದು, ಮಾರ್ಚ್‌ 14ರ ಮೊದಲು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಿಸಿದವರಿಗೆ ನ್ಯಾಯಾಲಯವು ಸೂಚಿಸಿತ್ತು.

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಜಾರಿಗೊಳಿಸುವುದಾಗಿ ಆಡಳಿತಾರೂಢ ಎಲ್‌ಡಿಎಫ್‌ ಸರ್ಕಾರ ಹಾಗೂ ಟಿಡಿಬಿ ತಿಳಿಸಿದ್ದವು. ಈ ನಿರ್ಧಾರವು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ಹಿಂಸಾತ್ಮಕ ಪ್ರತಿಭಟನೆಗೂ ಕಾರಣವಾಗಿತ್ತು.

ಇದೀಗ, ಟಿಡಿಬಿ ತನ್ನ ನಿಲುವು ಬದಲಿಸಿದೆ. ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಒಕ್ಕೂಟ ಸರ್ಕಾರವು ತನ್ನ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

ಬಿಂದು ಅಮ್ಮಿನಿ, ಕನಕದುರ್ಗ ಎಂಬ ಇಬ್ಬರು ಮಹಿಳೆಯರು 2019ರ ಜನವರಿ 2ರಂದು ಪೊಲೀಸ್ ರಕ್ಷಣೆಯೊಂದಿಗೆ ದೇಗುಲ ಪ್ರವೇಶಿಸಿದ್ದರು.

ಕೇರಳದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಎಲ್‌ಡಿಎಫ್‌ ಸಹ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ.

‘ಭಕ್ತರ ನಂಬಿಕೆಯನ್ನು ರಕ್ಷಿಸಲು ಸರ್ಕಾರ ಬದ್ಧ’ ಎಂದು ಕಾನೂನು ಸಚಿವ ಪಿ. ರಾಜೀವ್ ಈಚೆಗೆ ಪ್ರತಿಕ್ರಿಯಿಸಿದ್ದರು. ಸಚಿವರ ಈ ಹೇಳಿಕೆಯು, ‘ಪ್ರಗತಿಪರ ನಿಲುವಿನಿಂದ ಹಿಮ್ಮುಖವಾಗುವುದು’ ಎಂದೇ ವ್ಯಾಖ್ಯಾನಿಸಲಾಗಿದೆ.

ದೇವಸ್ವಂನ ನಿಲುವು ಒಂದೇ. ಸಂಪ್ರದಾಯ ‍ರಕ್ಷಿಸಬೇಕು ಮತ್ತು ಅನುಸರಿಸಬೇಕು
–ಕೆ. ಜಯಕುಮಾರ್, ಟಿಡಿಬಿ ಅಧ್ಯಕ್ಷ