ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದಿರುವ ಕೃತ್ಯದ ಹಿಂದೆ ಭೂಗತ ಪಾತಕಿಗಳ ನಂಟು ಇಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ಯೋಗೇಶ್ ಕದಂ ಶನಿವಾರ ಹೇಳಿದ್ದಾರೆ.
‘ಆರೋಪಿಯ ಕೃತ್ಯದ ಹಿಂದಿನ ಉದ್ದೇಶ ದರೋಡೆ ಮಾಡುವುದಾಗಿದೆ ಮತ್ತು ಚಾಕು ಇರಿತದಲ್ಲಿ ಯಾವುದೇ ಭೂಗತ ಪಾತಕಿಗಳ ಗುಂಪು ಭಾಗಿಯಾಗಿಲ್ಲ. ಈ ಅಂಶಗಳು ತನಿಖೆಯಲ್ಲಿ ಕಂಡುಬಂದಿವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಸುಕಿನಲ್ಲಿ ಸೈಫ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಪೊಲೀಸರ 30ಕ್ಕೂ ಹೆಚ್ಚು ತಂಡಗಳು ತೀವ್ರ ಶೋಧ ನಡೆಸುತ್ತಿವೆ.
‘ಪ್ರಾಥಮಿಕ ತನಿಖೆಯ ಪ್ರಕಾರ, ದಾಳಿಕೋರನು ಯಾವುದೇ ಕ್ರಿಮಿನಲ್ ಗ್ಯಾಂಗ್ ಜತೆ ಸಂಪರ್ಕ ಹೊಂದಿರುವುದು ಕಂಡುಬಂದಿಲ್ಲ. ಬಹುಶಃ ಆತನಿಗೆ ತಾನು ಯಾರ ಮನೆಗೆ ನುಗ್ಗಿದ್ದೇನೆ ಎನ್ನುವ ಅರಿವು ಇರಲಿಕ್ಕಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈಫ್ ಚೇತರಿಸಿಕೊಳ್ಳುತ್ತಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಶನಿವಾರ ತಿಳಿಸಿದ್ದಾರೆ.
‘ಸೈಫ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವರ ಬೆನ್ನುಮೂಳೆಯಲ್ಲಿ ಸಿಲುಕಿದ್ದ 2.5 ಇಂಚಿನ ಚಾಕುವಿನ ತುಂಡನ್ನು ಯಶಸ್ವಿಯಾಗಿ ತೆಗೆಯಲಾಯಿತು. ಬೆನ್ನುಮೂಳೆಯಲ್ಲಿ ಕಂಡುಬಂದಿದ್ದ ದ್ರವ ಸೋರಿಕೆಯನ್ನು ಸರಿಪಡಿಸಲಾಗಿದೆ. ಗಾಯಗಳು ವಾಸಿಯಾಗುತ್ತಿವೆ. ಅವರಿಗೆ ನರಗಳಲ್ಲೂ ಯಾವುದೇ ತೊಂದರೆ ಇಲ್ಲ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಅವರನ್ನು ತೀವ್ರ ನಿಗಾ ಘಟಕದಿಂದ ವಿಶೇಷ ಕೊಠಡಿಗೆ ಸ್ಥಳಾಂತರಿಸಲಾಗಿದೆ’ ಎಂದು ಲೀಲಾವತಿ ಆಸ್ಪತ್ರೆಯೆ ವೈದ್ಯ ಡಾ. ನಿತಿನ್ ಡಾಂಗೆ ಮಾಹಿತಿ ನೀಡಿದರು.
‘ದಾಳಿಕೋರ ಆಭರಣ ಮುಟ್ಟಿಲ್ಲ’
‘ದಾಳಿಕೋರನಿಗೆ ಸೈಫ್ ಪ್ರತಿರೋಧ ತೋರಿದಾಗ, ದಾಳಿಕೋರ ತುಂಬಾ ಆಕ್ರಮಣ ಕಾರಿಯಾಗಿ ಸೈಫ್‌ಗೆ ಹಲವು ಬಾರಿ ಇರಿದಿದ್ದಾನೆ. ಆದರೆ, ಕೊಠಡಿಯಲ್ಲಿ ಹೊರಗೆ ಕಾಣುವಂತೆ ಇಟ್ಟಿದ್ದ ಆಭರಣಗಳನ್ನು ಮುಟ್ಟಿರಲಿಲ್ಲ’ ಎಂದು ಸೈಫ್ ಅಲಿ ಖಾನ್ ಅವರ ಪತ್ನಿ ಮತ್ತು ನಟಿ ಕರೀನಾ ಕಪೂರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಂದ್ರಾದಲ್ಲಿರುವ ಬಾಲಿವುಡ್ ತಾರಾ ಜೋಡಿಯ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ನಸುಕಿನಲ್ಲಿ ನಡೆದ ದಾಳಿಯ ನಂತರ ಪೊಲೀಸರು ನಟಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.