ನವದೆಹಲಿ: ಮುಂಚಿತವಾಗಿ ನೋಟಿಸ್ ನೀಡದೆ ಕಟ್ಟಡಗಳನ್ನು ಉರುಳಿಸದಂತೆ ಆದೇಶವಿದ್ದರೂ, ಅದನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಕುರಿತು ಹೈಕೋರ್ಟ್‌ನಲ್ಲಿ ಪ್ರಶ್ನಿಸುವಂತೆ ಅರ್ಜಿದಾರನಿಗೆ ಸೂಚಿಸಿದೆ.
ಬಿ.ಆರ್.ಗವಾಯಿ ಹಾಗೂ ಕೆ.ವಿನೋದ್ ಚಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠ, ‘ಹೈಕೋರ್ಟ್ ಮುಂದೆ ನಿಮ್ಮ ಅರ್ಜಿ ಸಲ್ಲಿಸಿ’ ಎಂದು ಅರ್ಜಿದಾರ ಮೊಹಮ್ಮದ್ ಘಾಯೂರ್ ಅವರಿಗೆ ಶುಕ್ರವಾರ ಸೂಚನೆ ನೀಡಿದೆ.
‘ನೋಟಿಸ್ ನೀಡದೇ ಯಾವ ಕಟ್ಟಡವನ್ನೂ ಧ್ವಂಸಗೊಳಿಸುವಂತೆ ಇಲ್ಲ. ಧ್ವಂಸಗೊಳಿಸುವ ಮೊದಲು ನೋಟಿಸ್ ನೀಡಿ, ಅದಕ್ಕೆ ಉತ್ತರ ನೀಡಲು ಸಂಬಂಧಪಟ್ಟ ವ್ಯಕ್ತಿಗೆ 15 ದಿನಗಳ ಕಾಲಾವಕಾಶ ನೀಡಬೇಕು ಎಂದು 2024ರ ನ.13ರಂದು ಇಡೀ ದೇಶಕ್ಕೆ ಅನ್ವಯವಾಗುವಂತೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಟಿಸಿತ್ತು. ಆದರೆ, ಸಂಭಲ್‌ನಲ್ಲಿ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ಜ.10–11ರಂದು ಕುಟುಂಬಕ್ಕೆ ಸೇರಿದ್ದ ಕಟ್ಟಡವೊಂದರ ಭಾಗವನ್ನು ಉರುಳಿಸಿದ್ದಾರೆ ಎಂದು ಅರ್ಜಿದಾರರು ತಮ್ಮ ವಕೀಲ ಚಾಂದ್ ಖುರೇಷಿ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.