ADVERTISEMENT

ಸಲಿಂಗ ಮದುವೆ: ಸಂಸತ್ತಿಗೇ ಕಾಯ್ದೆ ರಚಿಸುವ ಅಧಿಕಾರ- ಸುಪ್ರೀಂಕೋರ್ಟ್‌

ಸಂವಿಧಾನ ಪೀಠದಲ್ಲಿ ಮುಂದುವರಿದ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2023, 20:30 IST
Last Updated 25 ಏಪ್ರಿಲ್ 2023, 20:30 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಮದುವೆ, ವಿಚ್ಛೇದನ ಹಾಗೂ ಉತ್ತರಾಧಿಕಾರದಂತಹ ವಿಷಯಗಳ ಕುರಿತು ಶಾಸನ ರೂಪಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಹೀಗಾಗಿ, ಸಲಿಂಗ ಮದುವೆಗೆ ನ್ಯಾಯಾಲಯ ಮಾನ್ಯತೆ ನೀಡುವುದು ಹೇಗೆ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಪ್ರಶ್ನಿಸಿದೆ.

ವಿಶೇಷ ವಿವಾಹ ಕಾಯ್ದೆಯನ್ನು ಪ್ರಸ್ತಾಪಿಸಿದ ಸುಪ್ರೀಂಕೋರ್ಟ್‌, ದತ್ತು ಪಡೆದುಕೊಳ್ಳುವುದು, ಉತ್ತರಾಧಿಕಾರ ಒಳಗೊಂಡಂತೆ ವೈಯಕ್ತಿಕ ಕಾನೂನುಗಳ ಮೇಲೆ ಈ ಕಾಯ್ದೆಯು ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿತು.

ಸಲಿಂಗ ಮದುವೆಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಮಂಗಳವಾರವೂ ಮುಂದುವರಿಯಿತು. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರಿರುವ ಸಂವಿಧಾನ ಪೀಠ ಅರ್ಜಿ ವಿಚಾರಣೆ ನಡೆಸಿತು.

ADVERTISEMENT

‘ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳಲ್ಲಿನ ವಿಷಯಗಳಿಗೆ ಸಂಬಂಧಿಸಿ ಮಧ್ಯಪ್ರವೇಶಿಸಲು ಸಂಸತ್ತಿಗೆ ಮಾತ್ರ ಅಧಿಕಾರ ಇದೆ ಎಂಬುದನ್ನು ನೀವು ಅಲ್ಲಗಳೆಯಲಾರಿರಿ’ ಎಂದು ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ನ್ಯಾಯಪೀಠ ಹೇಳಿತು.

‘ಸಹವರ್ತಿ ಪಟ್ಟಿಯಲ್ಲಿರುವ 5ನೇ ಅಂಶವು ಮದುವೆ ಹಾಗೂ ವಿಚ್ಛೇದನ ಕುರಿತು ವಿವರಣೆ ನೀಡುತ್ತದೆ. ಹೀಗಾಗಿ ಈ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಕ್ಕೆ ಅವಕಾಶ ಎಲ್ಲಿದೆ ಎಂಬುದೇ ನಮ್ಮ ಪ್ರಶ್ನೆ. ಈ ವಿಷಯ ಕುರಿತು ನ್ಯಾಯಾಲಯ ನಿರ್ಣಯಿಸಲು ಹೇಗೆ ಸಾಧ್ಯ?’ ಎಂದು ಹೇಳಿತು.

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮನೇಕಾ ಗುರುಸ್ವಾಮಿ, ‘ಈ ವಿಷಯ ಕುರಿತು ನಿರ್ಣಯ ಕೈಗೊಳ್ಳುವ ಅಧಿಕಾರ ಸಂಸತ್ತಿಗೆ ಇದೆ ಎಂಬುದಾಗಿ ಸರ್ಕಾರ ಹೇಳಲು ಸಾಧ್ಯವಿಲ್ಲ’ ಎಂದರು.

‘ಸಮುದಾಯವೊಂದರ ಹಕ್ಕುಗಳ ಉಲ್ಲಂಘನೆಯಾದಾಗ, ಸಂವಿಧಾನದ 32ನೇ ವಿಧಿಯಲ್ಲಿ ಹೇಳಿರುವಂತೆ ಸಂವಿಧಾನ ಪೀಠದ ಮೊರೆ ಹೋಗುವ ಅಧಿಕಾರ ವಂಚಿತ ಸಮುದಾಯಕ್ಕೆ ಇದೆ’ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕಾನೂನು ರೂಪಿಸುವ ಬಾಧ್ಯತೆ ಸಂಸದರ ಮೇಲಿರುವಾಗ, ಇಂಥದೇ ಕಾನೂನನ್ನು ರೂಪಿಸಲಾಗುತ್ತದೆ ಎಂದು ಊಹಿಸಿಕೊಳ್ಳಲು ಸಾಧ್ಯವೇ? ಈ ಕುರಿತು ಆದೇಶ ಹೊರಡಿಸಲು ಸಾಧ್ಯವೇ’ ಎಂದು ಪ್ರಶ್ನಿಸಿತು.

‘ವಿಶಾಖ ವಿರುದ್ಧ ರಾಜಸ್ಥಾನ ಸರ್ಕಾರ’ ಪ್ರಕರಣವನ್ನು ಪ್ರಸ್ತಾಪಿಸಿದ ನ್ಯಾಯಪೀಠ, ‘ಉದ್ಯೋಗ ಸ್ಥಳಗಳಲ್ಲಿ ಮಹಿಳೆ ಮೇಲೆ ನಡೆಯುವ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕಾನೂನಿನಲ್ಲಿನ ನ್ಯೂನತೆಗಳನ್ನು ಸರಿಪಡಿಸುವಂತೆ ಸೂಚಿಸಲಾಗಿತ್ತು. ಈ ವಿಷಯ ಕುರಿತು ಶಾಸಕಾಂಗವೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿತು.

‘ಪತಿ ಮತ್ತು ಪತ್ನಿ ಬದಲಾಗಿ ದಂಪತಿ ಎಂದು ಕರೆದು, ವ್ಯಕ್ತಿ ಎಂಬುದಕ್ಕೆ ಪುರುಷ ಮತ್ತು ಮಹಿಳೆ ಎಂದು ಬಳಸುತ್ತೇವೆ ಎಂದು ಭಾವಿಸಿ. ಇಬ್ಬರು ಹಿಂದೂ ಮಹಿಳೆಯರು ಅಥವಾ ಪುರುಷರು ಮದುವೆಯಾದಾಗ, ಅವರಿಬ್ಬರ ಪೈಕಿ ಒಬ್ಬರು ಮೃತರಾಗುತ್ತಾರೆ ಎಂದಿಟ್ಟುಕೊಳ್ಳಿ. ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ, ಹಿಂದೂ ಪುರುಷ ಮೃತಪಟ್ಟ ಸಂದರ್ಭದಲ್ಲಿ ಆ ವ್ಯಕ್ತಿ ಬರೆದಿಟ್ಟ ಮೃತ್ಯುಪತ್ರದ ಪ್ರಕಾರವೇ ಆಸ್ತಿಯನ್ನು ಭಾಗ ಮಾಡಲಾಗುತ್ತದೆ. ಮಹಿಳೆ ಮತ್ತು ಪುರುಷರಿಗೆ ಹಂಚಿಕೆಯಾಗುವ ಆಸ್ತಿ ಕುರಿತು ಕಾನೂನಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಅದೇ, ಉಯಿಲು ಬರೆದಿಟ್ಟ ನಂತರ ಮಹಿಳೆ ಮೃತಪಟ್ಟರೆ, ಉತ್ತರಾಧಿಕಾರಕ್ಕೆ ಬೇರೆಯೇ ವಿಧಾನವಿದೆ’ ಎಂದು ನ್ಯಾಯಪೀಠ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲೆ ಮನೇಕಾ ಗುರುಸ್ವಾಮಿ, ‘ಸಂವಿಧಾನ ಖಾತ್ರಿಪಡಿಸಿರುವ ಹಕ್ಕಿನಿಂದ ನಮ್ಮನ್ನು ವಂಚಿಸುವುದಕ್ಕೆ ಸಂಸತ್ತು ಕಾರಣವಾಗಬಾರದು’ ಎಂದು ಹೇಳಿದರು.

‘ನಮ್ಮ ಕಕ್ಷಿದಾರರು ವಿಶೇಷ ಸವಲತ್ತುಗಳನ್ನು ಕೇಳುತ್ತಿಲ್ಲ. ಅವರ ಸಂಬಂಧಕ್ಕೆ ವಿಶೇಷ ವಿವಾಹ ಕಾಯ್ದೆಯಡಿ ಮಾನ್ಯತೆ ನೀಡಬೇಕು ಎಂಬುದಷ್ಟೇ ಅವರ ಬೇಡಿಕೆಯಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

‘ವಿಶೇಷ ವಿವಾಹ ಕಾಯ್ದೆ ಹಾಗೂ ವೈಯಕ್ತಿಕ ಕಾನೂನುಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆ. ವಿಶೇಷ ವಿವಾಹ ಕಾಯ್ದೆಯಲ್ಲಿ ಮಾಡುವ ಯಾವುದೇ ಬದಲಾವಣೆ ವೈಯಕ್ತಿಕ ಕಾನೂನುಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದ  ನ್ಯಾಯಪೀಠ, ‘ವಿಶೇಷ ವಿವಾಹ ಕಾಯ್ದೆಯನ್ನು ಲಿಂಗ ತಟಸ್ಥವಾಗಿರುವಂತೆ ರೂಪಿಸಲಾಗಿದೆ’ ಎಂದು ಹೇಳಿತು.

‘ಅರ್ಜಿದಾರರು ತಮ್ಮ ಸಮುದಾಯದ (ಎಲ್‌ಜಿಬಿಟಿಕ್ಯೂಐಎ) ಹಿತಾಸಕ್ತಿಯನ್ನು ಪ್ರತಿನಿಧಿಸುತ್ತಾರೆಯೇ’ ಎಂದು ಪ್ರಶ್ನಿಸಿದ ನ್ಯಾಯಪೀಠ, ‘ತಾವು ಬದುಕು ರೀತಿಯನ್ನು ಸಂರಕ್ಷಿಸಿಕೊಳ್ಳುವವರು ಇರಬಹುದು’ ಎಂದು ಕೇಳಿತು.

‘ಸಲಿಂಗ ಮದುವೆ ವ್ಯಾಖ್ಯಾನದಡಿ ಬರಲು ಇಚ್ಛಿಸುವವರು ಇದರ ವ್ಯಾಪ್ತಿಗೆ ಬರಬಹುದು. ಬೇಡವಾದವರು ಬರಬೇಕಿಲ್ಲ’ ಎಂದು ವಕೀಲೆ ಮನೇಕಾ ಹೇಳಿದರು.

ಒಬ್ಬ ವ್ಯಕ್ತಿಯ ಲಿಂಗತ್ವ ಅನನ್ಯತೆ ಅಥವಾ ಲೈಂಗಿಕ ಆಸಕ್ತಿ ಏನೇ ಇದ್ದರೂ, ಆತನಿಗೆ ಕುಟುಂಬವನ್ನು ಹೊಂದುವ ಹಕ್ಕು ಇದೆ. ಈ ಹಕ್ಕು ಸಂವಿಧಾನದ 21ನೇ ವಿಧಿ ವ್ಯಾಪ್ತಿಯಲ್ಲಿಯೇ ಇರಬೇಕು ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.