ADVERTISEMENT

ಮಂಕಿಪಾಕ್ಸ್‌ನಿಂದ ಮೊದಲ ಸಾವು?: ಪರಿಶೀಲಿಸುತ್ತಿದ್ದೇವೆ ಎಂದ ಕೇರಳ ಆರೋಗ್ಯ ಸಚಿವೆ

ಪಿಟಿಐ
Published 1 ಆಗಸ್ಟ್ 2022, 13:05 IST
Last Updated 1 ಆಗಸ್ಟ್ 2022, 13:05 IST
   

ತಿರುವನಂತಪುರ: ಜುಲೈ 30ರಂದು ಮೃತಪಟ್ಟ ಕೇರಳದ 20 ವರ್ಷದ ಯುವಕನಿಗೆ ಮಂಕಿ ಪಾಕ್ಸ್ ಸೋಂಕು ತಗುಲಿರುವುದು ಆತನ ಮಾದರಿ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಆತ ಇತ್ತೀಚೆಗಷ್ಟೇ ಯುಎಇಯಿಂದ ವಾಪಸ್ ಆಗಿದ್ದ ಎಂದು ಮೂಲಗಳು ಹೇಳಿವೆ.

ಜುಲೈ 19ರಂದು ಯುಎಇನಲ್ಲಿ ಯುವಕನಿಂದ ಪರೀಕ್ಷೆಗಾಗಿ ಮಾದರಿ ಸಂಗಹಿಸಲಾಗಿತ್ತು. ಜುಲೈ 21ರಂದು ಆತ ಭಾರತಕ್ಕೆ ವಾಪಸ್ ಆಗಿದ್ದು, ಜುಲೈ 27ರಂದು ತ್ರಿಶೂರ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಂದು ತಿಳಿದು ಬಂದಿದೆ.

ADVERTISEMENT

ಬಳಿಕ, ಆರೋಗ್ಯ ಇಲಾಖೆಯು ಯುವಕನ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ(ಎನ್‌ಐವಿ) ಪರೀಕ್ಷೆಗಾಗಿ ಕಳುಹಿಸಿತ್ತು. ಆದರೆ, ಈ ಮಧ್ಯೆ ಜುಲೈ 30ರಂದು ಯುವಕ ಮೃತಪಟ್ಟಿದ್ದಾನೆ. ಇದೀಗ, ಪರೀಕ್ಷೆಯ ವರದಿ ಬಂದಿದ್ದು, ಮಂಕಿ ಪಾಕ್ಸ್‌ಗೆ ತುತ್ತಾಗಿದ್ದದ್ದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ದುಬೈನಲ್ಲಿ ಸಂಗ್ರಹಿಸಲಾಗಿದ್ದ ಮಾದರಿಯು ಪಾಸಿಟಿವ್ ಬಂದಿದ್ದು, ಜುಲೈ 30ರಂದೇ ಯುವಕನ ಸಂಬಂಧಿಕರಿಗೆ ತಿಳಿಸಲಾಗಿದೆ. ಆದರೆ, ಯುವಕ ಅಂದೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಯುವಕನ ಸಾವಿಗೆ ಕಾರಣವೇನು? ಎಂಬ ಬಗ್ಗೆ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಮೃತ ರೋಗಿಯು ಯುವಕನಾಗಿದ್ದು, ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅಲ್ಲದೆ, ಜುಲೈ 21ರಂದೇ ಯವಕ ವಾಪಸ್ ಆಗಿದ್ದರೂ ಆಸ್ಪತ್ರೆ ದಾಖಲು ವಿಳಂಬವಾಗಿರುವ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆ. ಮಂಕಿ ಪಾಕ್ಸ್, ಕೋವಿಡ್‌ನಷ್ಟು ಅಪಾಯಕಾರಿಯಲ್ಲ. ಸಾವಿನ ದರ ಅತ್ಯಂತ ಕಡಿಮೆ ಎಂದೂ ವೀಣಾ ಜಾರ್ಜ್ ತಿಳಿಸಿದ್ದಾರೆ.

ದೇಶದಲ್ಲಿ ಮೊದಲು ದೃಢಪಟ್ಟ ಮಂಕಿಪಾಕ್ಸ್‌ ಮೂರು ಪ್ರಕರಣಗಳೂ ಕೇರಳದಲ್ಲೇ ಪತ್ತೆಯಾಗಿದ್ದವು. ಈ ಮೂವರೂ ಸಂಯುಕ್ತ ಅರಬ್‌ ಸಂಸ್ಥಾನದಿಂದ (ಯುಎಇ) ವಾಪಸಾದವರು. ನಾಲ್ಕನೇ ಪ್ರಕರಣ ಪಶ್ಚಿಮ ದೆಹಲಿಯಲ್ಲಿ ವರದಿಯಾಗಿತ್ತು.

ಯುವಕ ಜುಲೈ 21ರಂದು ರಾತ್ರಿ ಕೇರಳಕ್ಕೆ ಬಂದು, ತ್ರಿಶೂರ್‌ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಈತನಿಗೆ ಯುಎಇಯಲ್ಲಿ ಇರುವಾಗಲೇ ಜುಲೈ 19ರಂದು ಮಂಕಿಪಾಕ್ಸ್‌ ಇರುವುದು ದೃಢಪಟ್ಟಿತ್ತು. ಯುವಕ ಮೃತಪಟ್ಟ ನಂತರವಷ್ಟೇ ಆತನ ಕುಟುಂಬದವರು ಈ ಮಾಹಿತಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮಂಕಿಪಾಕ್ಸ್‌ ರೋಗಿಗಳಿಗೆ ಚಿಕಿತ್ಸೆ ವಿಳಂಬ?

ಮಂಕಿಪಾಕ್ಸ್‌ ರೋಗಿಗಳಿಗೆ ಚಿಕಿತ್ಸೆ ಸಿಗುವುದು ವಿಳಂಬವಾಗುತ್ತಿದೆ. ಈ ಸೋಂಕಿನಲ್ಲಿ ಮರಣ ಪ್ರಮಾಣ ಅತ್ಯಂತ ಕಡಿಮೆ ಇದೆ ಎನ್ನುವ ಕಾರಣಕ್ಕೆ ಸಕಾಲಕ್ಕೆ ರೋಗಿಗಳಿಗೆ ಚಿಕಿತ್ಸೆ ಲಭಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.

ಮೃತ ಯುವಕನಿಗೆ ಮಂಕಿಪಾಕ್ಸ್‌ ರೋಗದ ಲಕ್ಷಣಗಳು ಕಾಣಿಸಿರಲಿಲ್ಲ, ಕೇರಳಕ್ಕೆ ಬಂದ ಮೇಲೂ ಅಂತಹ ಲಕ್ಷಣಗಳು ಗೋಚರಿಸಿರಲಿಲ್ಲ. ಹಾಗಾಗಿ ವೈರಾಣುವಿನ ರೂಪಾಂತರ ನಿರ್ಧರಿಸಲು ಸಮಗ್ರ ಅಧ್ಯಯನಗಳ ಅವಶ್ಯಕತೆಯೂ ಇತ್ತು. ಯುವಕನಸಾವಿಗೆ ನಿಜವಾದ ಕಾರಣ ಪತ್ತೆಗೆ ಆರೋಗ್ಯತಜ್ಞರ ತಂಡ ರಚಿಸಿದ್ದು, ತಜ್ಞರು ಪರಿಶೀಲಿಸಿ ವರದಿ ನೀಡಲಿದ್ದಾರೆ ಎಂದುಆರೋಗ್ಯ ಸಚಿವೆ ವೀಣಾ ಜಾರ್ಜ್‌ ಭಾನುವಾರ ಹೇಳಿದ್ದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.