ADVERTISEMENT

ಡೀಪ್‌ಫೇಕ್, ನಕಲಿ ಖಾತೆ: ತೀವ್ರ ಕಳವಳ ವ್ಯಕ್ತಪಡಿಸಿದ ಸಾರಾ ತೆಂಡೂಲ್ಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2023, 6:49 IST
Last Updated 24 ನವೆಂಬರ್ 2023, 6:49 IST
<div class="paragraphs"><p>ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ </p></div>

ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್

   

ಮುಂಬೈ: ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ಡೀಪ್‌ಫೇಕ್ ವಿಡಿಯೊ ಮತ್ತು ಚಿತ್ರಗಳನ್ನು ಸೃಷ್ಟಿಸುತ್ತಿರುವ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳನ್ನು ಕ್ರಿಯೇಟ್ ಮಾಡುತ್ತಿರುವ ಬಗ್ಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಇತರ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹೆಸರಿನಲ್ಲಿ ಕ್ರಿಯೇಟ್ ಮಾಡಲಾಗಿರುವ ನಕಲಿ ಖಾತೆಗಳ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

‘ನಮ್ಮೆಲ್ಲರಿಗೂ ನಮ್ಮ ಸಂತೋಷ, ದುಃಖ ಮತ್ತು ದೈನಂದಿನ ಚಟುವಟಿಕೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವು ಅದ್ಭುತ ಸ್ಥಳವಾಗಿದೆ. ಆದರೆ, ಇಲ್ಲಿ ತಂತ್ರಜ್ಞಾನದ ದುರುಪಯೋಗವನ್ನು ನೋಡಿ ಅತ್ಯಂತ ಬೇಸರವಾಗುತ್ತದೆ. ಇದು ಇಂಟರ್ನೆಟ್‌ನ ಸತ್ಯ ಮತ್ತು ದೃಢೀಕರಣದ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ. ನನ್ನದೇ ಕೆಲವು ಡೀಪ್‌ಫೇಕ್ ಚಿತ್ರಗಳನ್ನು ನಾನು ನೋಡಿದ್ದೇನೆ. ಎಕ್ಸ್‌ನಲ್ಲಿ ನನ್ನ ಹೆಸರಿನಲ್ಲಿ ಕೆಲವು ಖಾತೆಗಳನ್ನು ಸೃಷ್ಟಿಸಲಾಗಿದೆ. ಇದು ನನ್ನ ಫಾಲೋವರ್ಸ್‌ ಅನ್ನು ದಾರಿತಪ್ಪಿಸುವ ಕೆಲಸವಾಗಿದೆ. ನಾನು ಎಕ್ಸ್‌ನಲ್ಲಿ ಖಾತೆಯನ್ನು ಹೊಂದಿಲ್ಲ. ನನ್ನ ಹೆಸರಿನಲ್ಲಿ ಕ್ರಿಯೇಟ್ ಆಗಿರುವ ನಕಲಿ ಖಾತೆಗಳ ಬಗ್ಗೆ ಎಕ್ಸ್ ಸಂಸ್ಥೆ ಗಮನ ಹರಿಸುತ್ತದೆ ಮತ್ತು ಅವುಗಳನ್ನು ರದ್ದು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಸಾರಾ ಬರೆದುಕೊಂಡಿದ್ದಾರೆ. ಅಲ್ಲದೆ, ನಕಲಿ ಖಾತೆ ಸೃಷ್ಟಿಕರ್ತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೂ ಅವರು ಒತ್ತಾಯಿಸಿದ್ದಾರೆ.

‘ಸತ್ಯವನ್ನು ಬದಿಗೊತ್ತಿ ಮನರಂಜನೆ ಇರಬಾರದು. ನಂಬಿಕೆ ಮತ್ತು ವಾಸ್ತವದ ಆಧಾರದ ಮೇಲೆ ಸಂವಹನವನ್ನು ಪ್ರೋತ್ಸಾಹಿಸೋಣ’ ಎಂದು ಸಾರಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸೇರಿ ಹಲವು ಸೆಲೆಬ್ರಿಟಿಗಳ ಡೀಪ್‌ಫೇಕ್ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರದಾಡಿ ಭಾರಿ ಸಂಚಲನ ಸೃಷ್ಟಿಯಾಗಿತ್ತು. ಅಮಿತಾಬ್ ಬಚ್ಚನ್ ಸೇರಿ ಹಲವು ಸೆಲೆಬ್ರಿಟಿಗಳು ಈ ಬಗ್ಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಕತ್ರಿನಾ ಕೈಫ್, ಕಾಜೋಲ್ ಡೀಪ್‌ಫೇಕ್ ವಿಡಿಯೊಗಳೂ ಹರದಾಡಿದ್ದವು.

ಡೀಪ್‌ಫೇಕ್‌ ಭಾರತ ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ. ಅದು ಸಮಾಜದಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು ಎಂದು ಮೋದಿ ಮಾಧ್ಯಮಗಳಿಗೆ ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.