ADVERTISEMENT

ಶರಣಾಗಲಿಲ್ಲ ಶರವಣ ಭವನದ ಮಾಲೀಕ ಪಿ.ರಾಜಗೋಪಾಲ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 9:21 IST
Last Updated 8 ಜುಲೈ 2019, 9:21 IST
   

ಚೆನ್ನೈ: ಶರವಣ ಭವನ ಹೋಟೆಲ್ ಸಮೂಹದ ಮಾಲೀಕ ಪಿ.ರಾಜಗೋಪಾಲ್‌ಸುಪ್ರೀಂಕೋರ್ಟ್‌ ತೀರ್ಪಿನಂತೆ ಇದೇ ಭಾನುವಾರ ಪೊಲೀಸರಿಗೆ ಶರಣಾಗಬೇಕಿತ್ತು. ಆದರೆ, ಅವರು ಬರಲೇ ಇಲ್ಲ.

ಕಳೆದ ಕೆಲವು ದಿನಗಳಿಂದ ಇಲ್ಲಿನ ಅಶೋಕನಗರದ ಮನೆಯಲ್ಲಿ ವಾಸವಿದ್ದ ರಾಜಗೋಪಾಲ್‌ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದರು.ಅನಾರೋಗ್ಯದ ಕಾರಣ ಹೇಳಿಯೇ ಅವರು ತಮ್ಮ ಶರಣಾಗತಿಯನ್ನು ಅವಧಿಯನ್ನು ವಿಸ್ತರಿಸಲು ಸುಪ್ರೀಂಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆ ಇದೆ.

ADVERTISEMENT

ತನ್ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರನ ಹೆಂಡತಿಯನ್ನು ಮದುವೆಯಾಗುವ ದುರುದ್ದೇಶದಿಂದ 2001ರ ಅಕ್ಟೋಬರ್‌ನಲ್ಲಿ ನೌಕರನನ್ನು ಅಪಹರಿಸಿ ಕೊಲೆ ಮಾಡಿದ್ದ ಶರವಣ ಭವನ ಹೋಟೆಲ್ ಸಮೂಹದ ಮಾಲೀಕ ಪಿ.ರಾಜಗೋಪಾಲ್‌ಗೆ ಮದ್ರಾಸ್ ಹೈಕೋರ್ಟ್‌ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದು, ಜುಲೈ 7ರ ಒಳಗೆ ಶರಣಾಗಬೇಕು ಎಂದು ಸೂಚಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‌ ‘ಇದು ಸ್ಪಷ್ಟ ಉದ್ದೇಶಗಳೊಂದಿಗೆ ಮಾಡಿದ ಘೋರ ಕೃತ್ಯ’ ಎಂದು ಅಭಿಪ್ರಾಯಪಟ್ಟು2009ರಲ್ಲಿ ರಾಜಗೋಪಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದಕ್ಕೂ ಮೊದಲು, 2004ರಲ್ಲಿ ವಿಶೇಷ ನ್ಯಾಯಾಲಯವು ರಾಜಗೋಪಾಲ್ ಮತ್ತು ಇತರ ಐವರು ಸಚರರಿಗೆವಿಧಿಸಿದ್ದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯ ಅವಧಿಯನ್ನುಮದ್ರಾಸ್‌ಹೈಕೋರ್ಟ್‌ ವಿಸ್ತರಿಸಿತ್ತು.

ಏನಿದು ಪ್ರಕರಣ?

ಪ್ರಕರಣದ ಹಿನ್ನೆಲೆ 1990ರಿಂದ ಆರಂಭವಾಗುತ್ತದೆ.ಶರವಣ ಭವನ್ ಹೋಟೆಲ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿದ್ದರಾಮಸ್ವಾಮಿ ಅವರಮಗಳು ಜೀವಜ್ಯೋತಿಯ ಮೇಲೆ ಮಾಲೀಕ ರಾಜಗೋಪಾಲ್ ಕಣ್ಣು ಹಾಕಿದ್ದ. ಆ ವೇಳೆಗಾಗಲೇ ರಾಜಗೋಪಾಲ್‌ಗೆ ಇಬ್ಬರು ಹೆಂಡತಿಯರಿದ್ದರು. ಜೀವಜ್ಯೋತಿ ತನ್ನ ಮೂರನೇ ಹೆಂಡತಿಯಾಗಬೇಕು ಎನ್ನುವುದು ರಾಜಗೋಪಾಲ್ ಬಯಕೆಯಾಗಿತ್ತು. ಈ ಪ್ರಸ್ತಾಪವನ್ನು ಜೀವಜ್ಯೋತಿ ತಿರಸ್ಕರಿಸಿದ್ದರು.

ಶರವಣ ಭವನ್ ಹೋಟೆಲ್ ಸಮೂಹಕ್ಕೆ ನೌಕರನಾಗಿ ಸೇರಿದ, ಮನೆಪಾಠ ಹೇಳುತ್ತಿದ್ದ ಶಿಕ್ಷಕ ಶಾಂತಕುಮಾರ್‌ನನ್ನು ಜೀವಜ್ಯೋತಿ 1999ರಲ್ಲಿ ಮದುವೆಯಾದರು. ದಂಪತಿಯನ್ನು ಹಲವು ಬಾರಿ ಬೆದರಿಸಿದ್ದ ರಾಜಗೋಪಾಲ್‌ ಸಂಬಂಧ ಕಡಿದುಕೊಳ್ಳುವಂತೆ ಒತ್ತಡ ಹೇರಿದ್ದ. ಆದರೆ ದಂಪತಿ ಈ ಬೆದರಿಕೆಗೆ ಸೊಪ್ಪು ಹಾಕಿರಲಿಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.

‘ನಮ್ಮನ್ನು ಅಪಹರಿಸಲು ರಾಜಗೋಪಾಲ್‌ ಸಹಚರರು ಯತ್ನಿಸುತ್ತಿದ್ದಾರೆ’ ಎಂದು ಈ ದಂಪತಿ 2001ರ ಅಕ್ಟೋಬರ್ 1ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಅ.26ರಂದು ಜೀವಜ್ಯೋತಿಯ ಪತಿ ಶಾಂತಕುಮಾರ್‌ರನ್ನು ಚೈನ್ನೈನಿಂದ ಅಪಹರಿಸಿ ಕೊಡೈಕೆನಾಲ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಅದೇ ದಿನ ಶಾಂತಕುಮಾರ್ ಕೊಲೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.