ADVERTISEMENT

ಜಯಲಲಿತಾ ಆಪ್ತೆ ಶಶಿಕಲಾ ಜೈಲುವಾಸ ಮುಕ್ತಾಯ: ಸದ್ಯ ಆಸ್ಪತ್ರೆವಾಸ

ತಮಿಳುನಾಡು ಮಾಜಿ ಸಿ.ಎಂ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲು ಅಧಿಕಾರಿಗಳಿಂದ ಬಿಡುಗಡೆ ಪತ್ರ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:53 IST
Last Updated 27 ಜನವರಿ 2021, 19:53 IST
   

ಬೆಂಗಳೂರು: ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಇಲ್ಲಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ತಮಿಳುನಾಡಿನ ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿತರಾದ ನಾಯಕಿ ವಿ.ಕೆ.ಶಶಿಕಲಾ ನಟರಾಜನ್, ಅಧಿಕೃತ ವಾಗಿ ಬುಧವಾರ ಬಿಡುಗಡೆಯಾದರು.

ಕೋವಿಡ್‌ ಪೀಡಿತರಾಗಿರುವ ಕಾರಣಕ್ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಶಿಕಲಾ ಚಿಕಿತ್ಸೆಗೆ ಒಳಗಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ.ಶೇಷಮೂರ್ತಿ ಹಾಗೂ ಅಧಿಕಾರಿಗಳ ತಂಡ ಅಲ್ಲಿನ ವೈದ್ಯರ ಸಮ್ಮುಖದಲ್ಲೇ ಬಿಡುಗಡೆ ಪತ್ರಕ್ಕೆ ಶಶಿಕಲಾ ಸಹಿ ಪಡೆಯಿತು.

‘ಬಿಡುಗಡೆ ಪತ್ರ ಹಸ್ತಾಂತರಿಸಿದ ಬಳಿಕ, ಶಶಿಕಲಾ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರು’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ಆಸ್ಪತ್ರೆಗೆ ಬಂದಿದ್ದ ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ (ಎಎಂಎಂಕೆ) ಪಕ್ಷದ ನಾಯಕ ಟಿಟಿವಿ ದಿನಕರನ್‌, ‘ಶಶಿಕಲಾ ಬಿಡುಗಡೆಯಿಂದ ಸಂತಸವಾಗಿದೆ. ಈಗ ರಾಜಕೀಯದ ಯಾವುದೇ ವಿಚಾರ ಬೇಡ. ವೈದ್ಯರ ಸೂಚನೆಯಂತೆ ಅವರನ್ನು ತಮಿಳುನಾಡಿಗೆ ಕರೆದೊಯ್ಯಲಾಗುವುದು’ ಎಂದರು.

ಆಸ್ಪತ್ರೆ ಬಳಿ ನೆರೆದಿದ್ದ ಬೆಂಬಲಿಗರು: ಬಿಡುಗಡೆ ವಿಚಾರ ತಿಳಿದು ತಮಿಳುನಾಡಿನ ವಿವಿಧ ಭಾಗಗಳಿಂದ ಬಂದಿದದ ಶಶಿಕಲಾ ಬೆಂಬಲಿಗರುವಿಕ್ಟೋರಿಯಾ ಆಸ್ಪತ್ರೆ ಎದುರು ಜಮಾಯಿಸಿದ್ದರು.

ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಶಶಿಕಲಾಗೆ 2017ರಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾ ಗಿತ್ತು. ಸೆರೆವಾಸದ ಅವಧಿ ಬುಧವಾರಕ್ಕೆ (ಜ.27) ಪೂರ್ಣಗೊಂಡಿದೆ.

ಆಸ್ಪತ್ರೆಯಿಂದ ಶೀಘ್ರ ಬಿಡುಗಡೆ ಸಾಧ್ಯತೆ

‘ಶಶಿಕಲಾ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು, ಎರಡು ಅಥವಾ ಮೂರು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ತೀವ್ರ ಉಸಿರಾಟದ ಸಮಸ್ಯೆಯ ಕಾರಣ ಜ.20ರಂದು ಅವರನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‌ಜ.21ರಂದು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ, ಸಿಟಿ ಸ್ಕ್ಯಾನ್‌ಗೆ ಒಳಪಡಿಸಿದ ಬಳಿಕ ಶಶಿಕಲಾ ಕೋವಿಡ್‌ ಪೀಡಿತರಾಗಿರುವುದು ದೃಢಪಟ್ಟಿತ್ತು. ಏಳು ದಿನಗಳಿಂದ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಶಶಿಕಲಾ ಜೈಲಿನಿಂದ ಬಿಡುಗಡೆಯಾದರೂ ಇಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುತ್ತದೆ. ಮಾರ್ಗಸೂಚಿ ಅನುಸಾರ 10ನೇ ದಿನಕ್ಕೆ ಬಿಡುಗಡೆ ಮಾಡಬೇಕಾಗುತ್ತದೆ. ಈಗ ಸೋಂಕಿನ ಲಕ್ಷಣ ಇಲ್ಲ. ಕಳುಹಿಸುವ ಮೊದಲ ಮೂರು ದಿನಗಳು ಲಕ್ಷಣ ರಹಿತರಾಗಿರಬೇಕು’ ಎಂದೂ ಆಸ್ಪತ್ರೆಯು ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ. ‘ಶಶಿಕಲಾಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ, ಸಾಮಾನ್ಯ ರೋಗಿ ಎಂದು ಪರಿಗಣಿಸಿ ಚಿಕಿತ್ಸೆ ಮುಂದುವರಿಸಿ’ ಎಂದು ಕಾರಾಗೃಹ ಇಲಾಖೆಯು ವಿಕ್ಟೋರಿಯಾ ಆಸ್ಪತ್ರೆಗೆ ಪತ್ರದ ಮೂಲಕ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.