
ಕೊಚಿ: ಶಬರಿಮಲೆ ದೇಗುಲದಲ್ಲಿ ನಾಪತ್ತೆಯಾಗಿದ್ದ ಚಿನ್ನವನ್ನು ಕರ್ನಾಟಕದ ಕೋಟ್ಯಧಿಪತಿಯೊಬ್ಬರಿಂದ ಎಸ್‌ಐಟಿ ವಶಕ್ಕೆ ಪಡೆದಿದೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ವಿ.ಡಿ. ಸತೀಶನ್ ಶನಿವಾರ ಆರೋಪಿಸಿದ್ದಾರೆ.
‘ಶ್ರೀಮಂತ ವ್ಯಕ್ತಿಯೊಬ್ಬರಿಗೆ ದೇಗುಲದ ಚಿನ್ನವನ್ನು ಮಾರಾಟ ಮಾಡಲಾಗಿದೆ. ಕಾಂಗ್ರೆಸ್ ಮಾಡಿದ್ದ ಆರೋಪಗಳೆಲ್ಲ ನಿಜ ಎನ್ನುವುದು ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ಸಾಬೀತಾಗಿದೆ. ಹೀಗಾಗಿ ಮುಜರಾಯಿ ಸಚಿವ ವಿ.ಎನ್.ವಾಸವನ್ ರಾಜೀನಾಮೆ ಕೊಡಬೇಕು ಮತ್ತು ಟಿಡಿಬಿಯನ್ನು ವಿಸರ್ಜಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ಗೋವರ್ಧನ್ ಮಾಲೀಕತ್ವದ ಆಭರಣ ಮಳಿಗೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಲವು ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದಿದೆ. ದೇಗುಲದ ಗರ್ಭಗುಡಿಯ ಚೌಕಟ್ಟು ಮತ್ತು ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಹೊದಿಕೆ ಮಾಡಲು ಅವರು ಧನಸಹಾಯ ಮಾಡಿದ್ದರು ಎನ್ನಲಾಗಿತ್ತು. ಉದ್ಯಮಿ ಉಣ್ಣಿಕೃಷ್ಣನ್ ಪೊಟ್ಟಿ ಯೋಜನೆಯ ಪ್ರಮುಖ ಪ್ರಾಯೋಜಕ ಎಂಬುದು ಬಂಧನ ನಂತರ ಗೊತ್ತಾಗಿದೆ’ ಎಂದು ಸತೀಶನ್ ಹೇಳಿದರು.
ದೇಗುಲದ ಚಿನ್ನ ನಾಪತ್ತೆ ಬಯಲಾಗಿದ್ದೇ ನಮ್ಮಿಂದ. ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡುವಾಗ ಎಡವಿದ್ದರು. ಅದುವೇ ಚಿನ್ನ ನಾಪತ್ತೆ ಅಂಶ ವಿಚಾರಣೆ ವೇಳೆ ಹೊರಬರಲು ದಾರಿ ಆಯ್ತು.ಪಿ.ಎಸ್.ಪ್ರಶಾಂತ್, ಟಿಡಿಬಿ ಅಧ್ಯಕ್ಷ
‘ಹಾಲಿ ತಿರುವಾಂಕೂರು ದೇವಸ್ವಂ ಮಂಡಳಿಯಿಂದಲೇ (ಟಿಡಿಬಿ)ಇದೆಲ್ಲ ಆಗಿದೆ. ಮಂಡಳಿಗೆ ಎಲ್ಲ ಮಾಹಿತಿ ಇತ್ತು. ಪೊಟ್ಟಿ ಅವರನ್ನು ದ್ವಾರಪಾಲಕ ವಿಗ್ರಹಗಳ ಚಿನ್ನದ ಹೊದಿಕೆ ಕಾರ್ಯ ಕೈಗೊಳ್ಳಲು ಮಂಡಳಿ ಆಹ್ವಾನಿಸಿತ್ತು. ಹೈಕೋರ್ಟ್ ವಿಚಾರಣೆ ವೇಳೆ ಇದೆಲ್ಲವೂ ಬಯಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿಯಿಂದ ಭದ್ರತಾ ಕೋಣೆ ಪರಿಶೀಲನೆ
ಪತ್ತನಂತಿಟ್ಟ: ಶಬರಿಮಲೆ ದೇಗುಲದ ಮುಖ್ಯ ಭದ್ರಾಗಾರದಲ್ಲಿರುವ (ಸ್ಟ್ರಾಂಗ್ ರೂಂ) ಚಿನ್ನಾಭರಣ ಸೇರಿದಂತೆ ಎಲ್ಲ ಬೆಲೆಬಾಳುವ ವಸ್ತುಗಳ ಪರಿಶೀಲನೆ ಮತ್ತು ಪಟ್ಟಿ ಮಾಡಲು ಹೈಕೋರ್ಟ್ ಸೂಚನೆ ಮೇರೆಗೆ ನೇಮಕಗೊಂಡಿರುವ ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಶಂಕರನ್ ಅವರು ಶನಿವಾರ ಆರನ್ಮುಳ ಭದ್ರತಾ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಈಗಾಗಲೇ ಶಂಕರನ್ ಅವರು ಶಬರಿಮಲೆ ದೇಗುಲದ ಆವರಣದಲ್ಲೇ ಇರುವ ಒಂದು ಭದ್ರಾಗಾರದ ಪರಿಶೀಲನೆ ಮುಗಿಸಿದ್ದಾರೆ.
ಶಬರಿಮಲೆ ದೇಗುಲಕ್ಕೆ ಭಕ್ತರು ನೀಡಿರುವ ಅಮೂಲ್ಯವಾದ ಬೆಲೆಬಾಳುವ ವಸ್ತುಗಳನ್ನು ಆರನ್ಮುಳದಲ್ಲಿ ಇಡಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ತಿಳಿಸಿದ್ದಾರೆ. ಟಿಡಿಬಿ ಅಧಿಕಾರಿಗಳು ಅಕ್ಕಸಾಲಿಗರ ಸಮ್ಮುಖದಲ್ಲಿ ಆಭರಣಗಳನ್ನು ಮತ್ತೊಂದು ಕೊಠಡಿಗೆ ಸ್ಥಳಾಂತರಿಸಿ ಅಲ್ಲಿ ಪಟ್ಟಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಹಲವು ದಿನಗಳನ್ನು ತಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮಿಕಸ್ ಕ್ಯೂರಿಯಾಗಿ( ನ್ಯಾಯಾಲಯದ ಸಹಾಯಕ) ನೇಮಕಗೊಂಡಿರುವ ಶಂಕರನ್ ಅವರು ಪರಿಶೀಲನೆ ನಂತರ ಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.