ADVERTISEMENT

ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆ ಕನಸಿಗೆ ಗುಡ್ ಬೈ ಹೇಳಿ: ಸುಬ್ರಮಣಿಯನ್ ಸ್ವಾಮಿ

ಆರ್ಥಿಕ ವೃದ್ಧಿ ದರ ಕುಸಿತ ಹಿನ್ನೆಲೆ: ಮೋದಿ ಸರ್ಕಾರಕ್ಕೆ ಟಾಂಗ್

ಏಜೆನ್ಸೀಸ್
Published 31 ಆಗಸ್ಟ್ 2019, 12:00 IST
Last Updated 31 ಆಗಸ್ಟ್ 2019, 12:00 IST
   

ನವದೆಹಲಿ:ಯಾವುದೇ ಹೊಸ ಆರ್ಥಿಕ ನೀತಿ ತರದಿದ್ದರೆ 5ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಕನಸು ನನಸಾಗಿಸುವುದು ಅಸಾಧ್ಯ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ವೃದ್ಧಿ ದರವು6 ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂಬ ವರದಿಯ ಬೆನ್ನಲ್ಲೇ ಸ್ವಾಮಿ ಅವರು ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿನ ಆರ್ಥಿಕ ವೃದ್ಧಿ ದರವು ಶೇ 5ರಷ್ಟಾಗಿದೆ. ಈ ವೃದ್ಧಿ ದರ ಕುಸಿತವು ಆರ್ಥಿಕ ತಜ್ಞರ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿ ಇದೆ ಎಂದು ಶುಕ್ರವಾರ ವರದಿಯಾಗಿತ್ತು. ಇದರ ಜತೆಗೇ, ಸರ್ಕಾರಿ ಸ್ವಾಮ್ಯದ 10 ಬ್ಯಾಂಕುಗಳನ್ನು ವಿಲೀನಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.

‘ಯಾವುದೇ ಹೊಸ ಆರ್ಥಿಕ ನೀತಿ ರೂಪಿಸದಿದ್ದರೆ5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ನಿರೀಕ್ಷೆಗೆ ಗುಡ್ ಬೈ ಹೇಳಲು ಸಿದ್ಧರಾಗಿ. ಕುಸಿಯುತ್ತಿರುವ ಆರ್ಥಿಕತೆಯನ್ನುಧೈರ್ಯ ಅಥವಾ ಜ್ಞಾನದಿಂದ ಮಾತ್ರ ಸರಿಪಡಿಸಲು ಸಾಧ್ಯವಿಲ್ಲ. ಇವರೆಡೂ ಬೇಕಾಗುತ್ತವೆ. ಆದರೆ, ಈ ಎರಡೂ ಅಂಶಗಳು ಜತೆಯಾಗಿ ನಮ್ಮಲ್ಲಿಲ್ಲ’ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.