ನವದೆಹಲಿ: ಮದುವೆಗಾಗಿ ಮತಾಂತರ ತಡೆಯುವ ಉದ್ದೇಶದಿಂದ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಇತ್ತೀಚೆಗೆ ಜಾರಿಗೆ ತಂದಿರುವ ‘ವಿವಾದಾತ್ಮಕ’ ಕಾನೂನುಗಳನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ.
ಕಾನೂನುಗಳಲ್ಲಿ ಇರುವ ‘ವಿವಾದಾತ್ಮಕ ಅಂಶ’ಗಳಿಗೆ ತಡೆ ನೀಡಲು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠವು ನಿರಾಕರಿಸಿದೆ. ಎರಡೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ.
ಅಂತರಧರ್ಮೀಯ ಮದುವೆ ಆಗುವುದಕ್ಕಾಗಿ ಮತಾಂತರ ಆಗುವುದನ್ನು ತಡೆಯುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ‘ಕಾನೂನುಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ–2020’ ಜಾರಿಗೆ ತಂದಿದ್ದರೆ, ಉತ್ತರಾಖಂಡ ಸರ್ಕಾರವು ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2018’ ಅನ್ನು ಜಾರಿಗೆ ತಂದಿದೆ. ಈ ಎರಡೂ ಕಾಯ್ದೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ವಕೀಲ ವಿಶಾಲ್ ಠಾಕ್ರೆ ಮತ್ತು ಇತರರು ಹಾಗೂ ‘ಸಿಟಿಜನ್ ಫಾರ್ ಜಸ್ಟಿಸ್ ಎಂಡ್ ಪೀಸ್’ ಎಂಬ ಎನ್‌ಜಿಒ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.
ಎನ್‌ಜಿಒ ಪರವಾಗಿ ಹಾಜರಿದ್ದ ಹಿರಿಯ ವಕೀಲ ಸಿ.ಯು. ಸಿಂಗ್ ಅವರು, ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು ನೀಡಿದ್ದ ತೀರ್ಪೊಂದನ್ನು ಉಲ್ಲೇಖಿಸಿದರು. ವಿವಿಧ ರಾಜ್ಯಗಳಲ್ಲಿಯೂ ಇಂತಹ ಕಾಯ್ದೆಗಳು ಜಾರಿಗೆಬಂದಿವೆ ಎಂದರು. ಮದುವೆ ಕಾರ್ಯಕ್ರಮದ ಮಧ್ಯದಿಂದಲೇ ವಧು–ವರರನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಾರೆ. ಹಾಗಾಗಿ, ಕಾಯ್ದೆಯ ಕೆಲವು ಅಂಶ
ಗಳಿಗೆ ತಡೆ ಕೊಡಬೇಕು ಎಂದು ಕೋರಿದರು.
ಕಾಯ್ದೆಯ ಕೆಲವು ಅಂಶಗಳು ‘ದಮನಕಾರಿ ಮತ್ತು ಅಸಹನೀಯ’ ಎಂದು ಅವರು ಪ್ರತಿಪಾದಿಸಿದರು. ಮದುವೆಗೆ ಮುಂಚೆ ಸರ್ಕಾರದ ಅನುಮತಿ ಪಡೆಯಬೇಕು ಎಂಬುದಂತೂ ‘ಸಂಪೂರ್ಣವಾಗಿ ಅಸಹ್ಯ’ ಎಂದು ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.