ADVERTISEMENT

ಮಾಡಾಳ್ ಜಾಮೀನು ಪ್ರಶ್ನಿಸಿ ಲೋಕಾಯುಕ್ತ ಅರ್ಜಿ: ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

ಪಿಟಿಐ
Published 14 ಮಾರ್ಚ್ 2023, 6:49 IST
Last Updated 14 ಮಾರ್ಚ್ 2023, 6:49 IST
   

ನವದೆಹಲಿ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್‌) ಲಂಚ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಲೋಕಾಯುಕ್ತದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪೀಠದ ಮುಂದೆ ತುರ್ತು ವಿಚಾರಣೆಗೆ ಲೋಕಾಯುಕ್ತ ವಕೀಲರು ಮನವಿ ಮಾಡಿದ್ದರು. ಆದರೆ, ಸಾಂವಿಧಾನಿಕ ಪೀಠದ ಪ್ರಕರಣಗಳ ಕುರಿತಂತೆ ವಿಚಾರಣೆ ನಡೆಸುತ್ತಿರುವುದರಿಂದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠದ ಮುಂದೆ ವಿಷಯ ಪ್ರಸ್ತಾಪಿಸಲು ಸಿಜೆಐ ಸೂಚಿಸಿದರು.

ತಕ್ಷಣ ನ್ಯಾಯಮೂರ್ತಿ ಕೌಲ್ ನೇತೃತ್ವದ ಪೀಠಕ್ಕೆ ಧಾವಿಸಿದ ಲೋಕಾಯುಕ್ತ ಪರ ವಕೀಲರು, ತುರ್ತು ವಿಚಾರಣಾ ಪಟ್ಟಿಗೆ ಸೇರಿಸಲು ಮನವಿ ಮಾಡಿದರು. ಆದರೆ, ಅರ್ಜಿಯ ಶೀಘ್ರ ಇತ್ಯರ್ಥದ ಅಗತ್ಯ ಏನು ಎಂದು ನ್ಯಾಯಮೂರ್ತಿ ಕೌಲ್, ವಕೀಲರನ್ನು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ವಕೀಲರು, ಆರೋಪಿಯು ಹಾಲಿ ಶಾಸಕರಾಗಿದ್ದು, ಅವರ ಬಳಿಯಿದ್ದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಕೀಲರ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಕೌಲ್, ಸಾಧ್ಯವಾದಷ್ಟು ಬೇಗ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿದರು.

ಮಧ್ಯಾಹ್ನ 2ಗಂಟೆಗೆ ವಿಚಾರಣೆ ನಡೆಸುವಂತೆ ವಕೀಲರು ಮರು ಮನವಿ ಮಾಡಿದಾಗ, ಇದು ಜಾಮೀನು ರದ್ದು ಅರ್ಜಿಯಾಗಿರುವುದರಿಂದ ಬಿಡುವಿನ ಸಮಯದಲ್ಲಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.