ADVERTISEMENT

ಸಮುದಾಯ ಭೋಜನಾಲಯ ಸ್ಥಾಪನೆ ಅರ್ಜಿ ತುರ್ತು ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

ಪಿಟಿಐ
Published 22 ಅಕ್ಟೋಬರ್ 2021, 9:16 IST
Last Updated 22 ಅಕ್ಟೋಬರ್ 2021, 9:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ‘ಸಮುದಾಯ ಭೋಜನಾಲಯ‘ ಸ್ಥಾಪಿಸಲು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಸಮ್ಮತಿಸಿತು.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠದ ಎದುರು ಅರ್ಜಿ ಪರಿಗಣನಗೆ ಬಂದಿತ್ತು. ವಕೀಲರಾದ ಅಶಿಮಾ ಮಾಂಡ್ಲಾ ಅವರು, ದೇಶದಲ್ಲಿರುವ ಕೋವಿಡ್‌ ಪರಿಸ್ಥಿತಿಯಲ್ಲಿ ಈ ವಿಷಯ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದನ್ನು ಗಮನಕ್ಕೆ ತಂದರು.

ಅರ್ಜಿ ವಿಚಾರಣೆಗೆ ಅಕ್ಟೋಬರ್ 27ರ ದಿನಾಂಕವನ್ನು ನಿಗದಿಪಡಿಸಿದ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಅವರು, ಈ ಸಂಬಂಧ ನೋಟಿಸ್‌ ಜಾರಿ ಮಾಡಿದ್ದ ಪೀಠದ ನೇತೃತ್ವವನ್ನೂ ನಾನು ವಹಿಸಿದ್ದೆ ಎಂದು ಸ್ಮರಿಸಿದರು.

ADVERTISEMENT

ಕಡುಬಡವರಿಗಾಗಿ ಸಮುದಾಯ ಭೋಜನಾಲಯ ನಿರ್ಮಾಣ ಕುರಿತ ನಿರ್ದೇಶನಕ್ಕೆ ಉತ್ತರಿಸಿ ಪ್ರಮಾಣಪತ್ರ ದಾಖಲಿಸಲು ವಿಫಲರಾಗಿದ್ದ ಆರು ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಕಳೆದ ವರ್ಷದ ಫೆಬ್ರುವರಿ 17ರಂದು ತಲಾ ಐದು ಲಕ್ಷ ದಂಡ ವಿಧಿಸಿತ್ತು. ದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ಗೋವಾಗೆ ದಂಡ ವಿಧಿಸಲಾಗಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರಾದ ಆಶಿಮಾ ಮಾಂಡ್ಲಾ ಅವರಿಗೆ, ಪಿಐಎಲ್‌ಗೆ ಉತ್ತರಿಸಿ ಪ್ರತಿಕ್ರಿಯೆಯನ್ನು ದಾಖಲಿಸದ ರಾಜ್ಯಗಳ ಪಟ್ಟಿ ಸಿದ್ದಪಡಿಸಬೇಕು ಎಂದು ಪೀಠ ಸೂಚಿಸಿತು.

‘ಐದು ವರ್ಷದೊಳಗಿನ ಶೇ 69ರಷ್ಟು ಮಕ್ಕಳು ಅಪೌಷ್ಟಿಕತೆ ಕಾರಣದಿಂದ ಜೀವ ಕಳೆದುಕೊಂಡಿದ್ದಾರೆ. ಸಮುದಾಯ ಭೋಜನಾಲಯ ಸ್ಥಾಪನೆಗೆ ಇದು ಸಕಾಲ’ ಎಂದೂ ವಕೀಲರು ಪ್ರತಿಪಾದಿಸಿದರು.

ಸಮುದಾಯ ಭೋಜನಾಲಯ ಸ್ಥಾಪನೆ ಕುರಿತು ಅಕ್ಟೋಬರ್ 18,2019ರಂದು ಒಲವು ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಹಸಿವಿನಂತಹ ಸಮಸ್ಯೆಯನ್ನು ಎದುರಿಸಲು ಇಂಥ ವ್ಯವಸ್ಥೆಯು ಅಗತ್ಯ ಎಂದು ಪ್ರತಿಪಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.