ADVERTISEMENT

ರಾಜಸ್ಥಾನ| ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಹಿಂಪಡೆದ ಸ್ಪೀಕರ್‌

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 7:37 IST
Last Updated 27 ಜುಲೈ 2020, 7:37 IST
   

ದೆಹಲಿ: ಸಚಿನ್ ಪೈಲಟ್ ಮತ್ತು 18 ಭಿನ್ನಮತೀಯ ಕಾಂಗ್ರೆಸ್ ಶಾಸಕರ ವಿರುದ್ಧದ ಅನರ್ಹತೆ ವಿಚಾರಣೆಯನ್ನು ಜುಲೈ 24 ರವರೆಗೆ ಮುಂದೂಡಬೇಕೆಂದು ಸೂಚಿಸಿದ್ದ ರಾಜಸ್ಥಾನ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸ್ಪೀಕರ್‌ ಸೋಮವಾರ ಹಿಂಪಡೆದಿದ್ದಾರೆ.

ಮೇಲ್ಮನವಿಯನ್ನು ಹಿಂಪಡೆಯಲು ರಾಜಸ್ಥಾನ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಅನುಮತಿಯನ್ನೂ ನೀಡಿತು.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ಪೀಠದ ಎದುರು ಸ್ಪೀಕರ್‌ ಜೋಶಿ ವಕೀಲ ಕಪೀಲ್‌ ಸಿಬಲ್ ಸೋಮವಾರ ಹಾಜರಾದರು. ‘ಅನರ್ಹತೆ ವಿಚಾರಣೆಯನ್ನು ಸ್ಪೀಕರ್‌ ಶುಕ್ರವಾರದ ವರೆಗೆ (ಜುಲೈ24) ಮುಂದೂಡಬೇಕು ಎಂದು ಕಳೆದ ಮಂಗಳವಾರ (ಜುಲೈ 21) ರಾಜಸ್ಥಾನ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್‌ ಈ ವಿಚಾರದಲ್ಲಿ ಯಾವುದೇ ಆದೇಶ ನೀಡಬಾರದು ಎಂದು ಕೋರಿದ್ದ ಸ್ಪೀಕರ್‌ ಅರ್ಜಿಗೆ ಸುಪ್ರೀಂ ಕೋರ್ಟ್ ಮನ್ನಣೆ ನೀಡಿಲ್ಲ.ಈ ಮಧ್ಯೆ ರಾಜಸ್ಥಾನ ಹೈಕೋರ್ಟ್‌ ಹೊಸ ಆದೇಶ ನೀಡಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿರುವ ಈ ಮೇಲ್ಮನವಿ ಪರಿಣಾಮಕಾರಿಯಲ್ಲ,’ಎಂದು ಹೇಳಿದರು.

ADVERTISEMENT

ಪೈಲಟ್ ಸೇರಿದಂತೆ 19 ಭಿನ್ನಮತೀಯ ಕಾಂಗ್ರೆಸ್ ಶಾಸಕರಿಗೆ ಸ್ಪೀಕರ್ ನೀಡಿದ ಅನರ್ಹತೆ ನೋಟಿಸ್‌ ಕುರಿತು ವಿಚಾರಣೆ ನಡೆಸಿದ್ದ ರಾಜಸ್ಥಾನ ಹೈಕೋರ್ಟ್‌ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕಳೆದ ಶುಕ್ರವಾರ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.