ADVERTISEMENT

ರಾಮದೇವ ಕ್ಷಮಾಪಣೆಯಲ್ಲಿ ಸುಧಾರಣೆ: ಸುಪ್ರೀಂ ಕೋರ್ಟ್

ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ಪ್ರಕರಣ

ಪಿಟಿಐ
Published 30 ಏಪ್ರಿಲ್ 2024, 15:53 IST
Last Updated 30 ಏಪ್ರಿಲ್ 2024, 15:53 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಯೋಗ ಗುರು ಬಾಬಾ ರಾಮದೇವ, ಅವರ ಆಪ್ತ ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್ ಕಂಪನಿಯು ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ಪ್ರಕರಣದಲ್ಲಿ ಪತ್ರಿಕೆಗಳ ಮೂಲಕ ಕೋರಿರುವ ಬಹಿರಂಗ ಕ್ಷಮಾಪಣೆಯಲ್ಲಿ ಎದ್ದು ಕಾಣುವಂತಹ ಸುಧಾರಣೆ ಇದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. 

ಕ್ಷಮಾಪಣೆಯಲ್ಲಿ ಬಳಕೆಗೆಯಾಗಿರುವ ಭಾಷೆಯು ತೃಪ್ತಿಕರವಾಗಿದೆ, ಕ್ಷಮಾಪಣೆ ಕೇಳುವಾಗ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇದ್ದ ವಿಭಾಗೀಯ ಪೀಠವು ರಾಮದೇವ, ಬಾಲಕೃಷ್ಣ ಹಾಗೂ ಕಂಪನಿಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಉದ್ದೇಶಿಸಿ ಹೇಳಿದೆ.

‘ಕ್ಷಮಾಪಣೆಯಲ್ಲಿ ಎದ್ದುಕಾಣುವಂತಹ ಸುಧಾರಣೆ ಇದೆ. ಇದನ್ನು ನಾವು ಮೆಚ್ಚುತ್ತೇವೆ. ಅಂತೂ ಅವರಿಗೆ ಅರ್ಥ ಆಗಿದೆ’ ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದ್ದಾರೆ. ಹಿಂದೆ ಪ್ರಕಟಿಸಿದ್ದ ಕ್ಷಮಾಪಣೆಯಲ್ಲಿ ಕಂಪನಿಯ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ADVERTISEMENT

ಐಎಂಎ ಅಧ್ಯಕ್ಷರ ಹೇಳಿಕೆ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ಅವರು ರಾಮದೇವ ಮತ್ತು ಅವರ ಕಂಪನಿಗಳ ವಿರುದ್ಧ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಕುರಿತು ಆಡಿರುವ ಮಾತುಗಳನ್ನು ಪೀಠವು ಗಂಭೀರವಾಗಿ ಪರಿಗಣಿಸಿದೆ.

ಅಶೋಕನ್ ಆಡಿರುವ ಮಾತುಗಳು ದುರದೃಷ್ಟಕರ ಎಂದು ರೋಹಟಗಿ ಹೇಳಿದರು. ‘ವಿಚಾರಣೆಯಲ್ಲಿ ನಾವು ಯಾವ ಬಗೆಯಲ್ಲಿ ಮುಂದುವರಿಯಬೇಕು ಎಂಬುದನ್ನು ನೀವು ಹೇಗೆ ತೀರ್ಮಾನಿಸುತ್ತೀರಿ, ನೀವು ಆಡಿರುವ ಮಾತುಗಳು ಮೆಚ್ಚುಗೆಗೆ ಪಾತ್ರವಾಗುವಂಥವೇನೂ ಅಲ್ಲ. ಹೆಚ್ಚು ಗಂಭೀರವಾದ ಪರಿಣಮಗಳಿಗೆ ಸಿದ್ಧವಾಗಿರಿ’ ಎಂದು ಪೀಠವು ಐಎಂಎ ಪರ ವಕೀಲರಿಗೆ ಹೇಳಿತು.

ಐಎಂಎ ಬಗ್ಗೆ ಸುಪ್ರೀಂ ಕೋರ್ಟ್ ಟೀಕೆ ಮಾಡಿರುವುದು ದುರದೃಷ್ಟಕರ ಎಂದು ಅಶೋಕನ್ ಹೇಳಿರುವುದಾಗಿ ವರದಿಯಾಗಿದೆ. ಕೋರ್ಟ್ ಆಡಿರುವ ಅಸ್ಪಷ್ಟವಾದ ಮಾತುಗಳು ಖಾಸಗಿ ವೈದ್ಯರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ ಎಂದು ಕೂಡ ಅವರು ಹೇಳಿದ್ದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.