ADVERTISEMENT

ಬಡ್ತಿಯಲ್ಲಿ ಮೀಸಲಾತಿ: ಅಂಶಗಳ ಪಟ್ಟಿ ಮಾಡಲು ‘ಸುಪ್ರೀಂ’ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 15:13 IST
Last Updated 18 ಜನವರಿ 2021, 15:13 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತೀರ್ಪು ನೀಡಲು, ಯಾವೆಲ್ಲ ಅಂಶಗಳು ಹಾಗೂ ವಿಷಯಗಳು ವಿಚಾರಣೆಯಲ್ಲಿ ಒಳಗೊಳ್ಳಬೇಕು ಎನ್ನುವ ಪಟ್ಟಿಯನ್ನು ರಚಿಸುವಂತೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

‘ಎರಡು ವಾರದೊಳಗಾಗಿ ಆಯಾ ರಾಜ್ಯಗಳಲ್ಲಿ ಇರುವ ಸಮಸ್ಯೆಗಳು, ಅಂಶಗಳ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಅಟಾರ್ನಿ ಜನರಲ್‌ ಅವರಿಗೆ ಸಲ್ಲಿಸಿ’ ಎಂದು ವಿವಿಧ ರಾಜ್ಯಗಳ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌, ವಿನೀತ್‌ ಶರಣ್‌ ಅವರಿದ್ದ ಪೀಠವು ನಿರ್ದೇಶಿಸಿತು.

‘ಎಂ.ನಾಗರಾಜ್‌ ಹಾಗೂ ಭಾರತ ಸರ್ಕಾರ(2006) ಪ್ರಕರಣದಲ್ಲಿ ಈ ನ್ಯಾಯಾಲಯವು ನೀಡಿದ ತೀರ್ಪನ್ನು ವಿವಿಧ ಬಡ್ತಿಗೆ ಅನ್ವಯಿಸಬೇಕು ಎಂದು ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಸಲ್ಲಿಕೆಯಾಗಿದ್ದ ನೂರಕ್ಕೂ ಅಧಿಕ ಪ್ರಕರಣಗಳ ವಿಚಾರಣೆ ನಡೆಸಿದ ಪೀಠವು ಹೇಳಿತು.

ADVERTISEMENT

ಬಡ್ತಿಯಲ್ಲಿ ಮೀಸಲಾತಿ ನೀಡುವ ಮುನ್ನ, ಪ್ರಾತಿನಿಧ್ಯದಲ್ಲಿ ಕೊರತೆ ಹಾಗೂ ಆಡಳಿತದ ದಕ್ಷತೆಯ ಮೇಲೆ ಆಗುವ ಪರಿಣಾಮದ ಮಾಹಿತಿಯನ್ನು ಸಂಗ್ರಹಿಸಲು ಎಂ. ನಾಗರಾಜ್‌ (2006) ತೀರ್ಪಿನಲ್ಲಿ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿತ್ತು.

‘ವಿವಿಧ ರಾಜ್ಯಗಳಿಂದ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿನ ಅಂಶಗಳು ಬೇರೆ ಬೇರೆಯಾಗಿವೆ. ರಾಜ್ಯಗಳಿಂದ ವಿವರ ಪಡೆದ ಬಳಿಕ, ಈ ಎಲ್ಲ ಅರ್ಜಿಗಳ ಪರವಾಗಿ ವಾದಿಸುತ್ತಿರುವ ವಕೀಲರ ಜೊತೆ ಅಟಾರ್ನಿ ಜನರಲ್‌ ಸಭೆ ನಡೆಸಬಹುದು. ನಂತರದಲ್ಲಿ ಸಮಸ್ಯೆ ಹಾಗೂ ವಿವಾದಾಂಶಗಳನ್ನು ಅಂತಿಮಗೊಳಿಸಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಪ್ಪಿಸಬೇಕು’ ಎಂದು ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು 2019 ಏ.15ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಈ ಹಿಂದೆ ತಿರಸ್ಕರಿಸಿತ್ತು. 2020 ಜ.31ರವರೆಗಿನ ಮಾಹಿತಿಯಂತೆ 23 ಇಲಾಖೆಗಳಲ್ಲಿ 1.3 ಲಕ್ಷ ಬಡ್ತಿಯು ವಿಳಂಬವಾಗಿ, ಉದ್ಯೋಗಿಗಳಿಗೆ ಆರ್ಥಿಕ ನಷ್ಟ ಹಾಗೂ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನುವುದು ಕೇಂದ್ರದ ಕಳವಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.