ADVERTISEMENT

ಮುಂದಡಿ ಇಡದಂತೆ ಮಹಾರಾಷ್ಟ್ರ ಸ್ವೀಕರ್‌ಗೆ ‘ಸುಪ್ರೀಂ’ ಸೂಚನೆ

ಶಿವಸೇನಾ ಬಂಡಾಯ ಶಾಸಕರ ಅನರ್ಹತೆ ಕೋರಿದ ಉದ್ಧವ್‌ ಅರ್ಜಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 14:18 IST
Last Updated 11 ಜುಲೈ 2022, 14:18 IST
ಸುಪ್ರೀಂ ಕೋರ್ಟ್‌ (ಪಿಟಿಐ ಚಿತ್ರ) 
ಸುಪ್ರೀಂ ಕೋರ್ಟ್‌ (ಪಿಟಿಐ ಚಿತ್ರ)    

ನವದೆಹಲಿ:ಬಂಡಾಯ ನಾಯಕ ಏಕನಾಥ್‌ ಶಿಂಧೆ ಮತ್ತು ಇತರ ಶಾಸಕರ ಅನರ್ಹತೆ ಕೋರಿ ಶಿವಸೇನಾ ಸಲ್ಲಿಸಿರುವ ಅರ್ಜಿಯ ಸಂಬಂಧ ಲೋಪದೋಷ ಪರಿಶೀಲಿಸುವವರೆಗೂ ಮುಂದಿನ ಪ್ರಕ್ರಿಯೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್‌ಗೆ ಸೋಮವಾರ ಸೂಚಿಸಿದೆ.

ಶಿವಸೇನಾ ಬಂಡಾಯ ಶಾಸಕರ ವಿರುದ್ಧದ ಅನರ್ಹತೆ ಮತ್ತು ಮುಖ್ಯ ಸಚೇತಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ಶಿವಸೇನಾದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌, ಶಾಸಕರ ಅನರ್ಹತೆ ಕೋರಿರುವ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಹಾಗಾಗಿ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವವರೆಗೆ, ಸ್ಪೀಕರ್‌ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಕೋರ್ಟ್‌ಗೆ ಮನವಿ ಮಾಡಿದರು.

ADVERTISEMENT

ಮುಖ್ಯ ನ್ಯಾಯಮೂರ್ತಿಗಳು, ‘ಈ ಅರ್ಜಿ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳಬಾರದೆಂದುವಿಧಾನಸಭೆ ಸ್ಪೀಕರ್‌ಗೆ ತಿಳಿಸಿ. ನೋಡೋಣ, ನಾವು ಅರ್ಜಿಯ ವಿಚಾರಣೆ ನಡೆಸುತ್ತೇವೆ’ ಎಂದುಮಹಾರಾಷ್ಟ್ರ ರಾಜ್ಯಪಾಲರ ಪ್ರತಿನಿಧಿಯಾಗಿ ಹಾಜರಿದ್ದ ತುಷಾರ್‌ ಮೆಹ್ತಾ ಅವರಿಗೆ ತಿಳಿಸಿದರು.

ಸೇನಾದ ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್‌ಗೆ ಉತ್ತರಿಸಲುಉಪ ಸ್ಪೀಕರ್‌ ನೀಡಿದ್ದ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್‌ ಈ ಮೊದಲು ಜುಲೈ 12ರವರೆಗೆ ವಿಸ್ತರಿಸಿತ್ತು.

ವಿಶ್ವಾಸಮತ ಕೋರಲು ಅನುಮತಿಸಿದ ಮತ್ತು ಮುಖ್ಯಮಂತ್ರಿಯಾಗಲು ಶಿಂಧೆ ಅವರಿಗೆ ಆಹ್ವಾನ ನೀಡಿದ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಎರಡು ಪ್ರತ್ಯೇಕ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.