ADVERTISEMENT

ವಿದ್ಯಾರ್ಥಿಗಳ ಹಿತ ಕಾಪಾಡಿ: ಸಿಬಿಎಸ್‌ಇ, ಯುಜಿಸಿಗೆ ‘ಸುಪ್ರೀಂ’ ಸೂಚನೆ

ಪಿಟಿಐ
Published 22 ಸೆಪ್ಟೆಂಬರ್ 2020, 12:03 IST
Last Updated 22 ಸೆಪ್ಟೆಂಬರ್ 2020, 12:03 IST
   

ನವದೆಹಲಿ: ಪ್ರಸಕ್ತಸಾಲಿನ 12ನೇ ತರಗತಿಯ ಪೂರಕ ಪರೀಕ್ಷೆಗಳ ಫಲಿತಾಂಶವನ್ನು ತ್ವರಿತವಾಗಿ ಪ್ರಕಟಿಸಬೇಕು ಎಂದು ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ (ಸಿಬಿಎಸ್ಇ) ಸಲಹೆ ನೀಡಿರುವ ಸುಪ್ರೀಂ ಕೋರ್ಟ್, ವಿಶೇಷ ಸಂದರ್ಭವಾಗಿರುವ ಕಾರಣ ಈ ವಿದ್ಯಾರ್ಥಿಗಳಿಗೆ ಪದವಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಸೂಚಿಸಿದೆ.

ಮಂಗಳವಾರದಿಂದ (ಸೆ. 22) ಆರಂಭವಾಗಿರುವ ಪೂರಕ ಪರೀಕ್ಷೆಗಳು ಇದೇ 29ರವರೆಗೆ ನಡೆಯಲಿದ್ದು, ಎರಡು ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಈ ವಿದ್ಯಾರ್ಥಿಗಳ ಶೈಕ್ಷಣಿಕ ಅವಧಿಗೆ ಧಕ್ಕೆ ಆಗದಂತೆ ಕ್ರಮವಹಿಸಬೇಕು ಎಂದು ಸುಪ್ರೀಂಕೋರ್ಟ್‌ ಯುಜಿಸಿ ಮತ್ತು ಸಿಬಿಎಸ್‌ಇಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ ವಿಲ್ಕರ್ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠ ವಿಚಾರಣೆ ನಡೆಸಿತು.ಯುಜಿಸಿಯು ಪದವಿಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಯಾವುದೇ ಸಂದರ್ಭದಲ್ಲಿ ಪ್ರಕಟಿಸಬಹುದು ಎಂಬುದನ್ನು ಯುಜಿಸಿ ಪರ ವಕೀಲರು ಪೀಠದ ಗಮನಕ್ಕೆ ತಂದರು.

ADVERTISEMENT

ಇದೇ 24ರವರೆಗೂ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಪ್ರಕಟಿಸಬಾರದು ಎಂದು ಸೂಚಿಸಿದ ಪೀಠವು ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು.

ವೇಳಾಪಟ್ಟಿ ಟ್ವೀಟ್‌ ಮಾಡಿದ ಸಚಿವ: ಇದೇ ವೇಳೆ ಶಿಕ್ಷಣ ಸಚಿವ ರಮೇಶ್‌ ನಿಶಾಂಕ್ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ 2020–21ನೇ ಸಾಲಿನ ಯುಜಿಸಿ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅದರ ಪ್ರಕಾರ ಪ್ರವೇಶ ಪ್ರಕ್ರಿಯೆ ಅಕ್ಟೋಬರ್‌ 31ರೊಳಗೆ ಪೂರ್ಣಗೊಂಡು, ಮೊದಲ ವರ್ಷದ (ಪ್ರಥಮ ಸೆಮಿಸ್ಟರ್‌) ತರಗತಿಗಳು ನವೆಂಬರ್‌ 1ರಿಂದ ಆರಂಭವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.