ADVERTISEMENT

ಅತ್ಯಾಚಾರ ನಿರ್ಧರಿಸಲು ಎರಡು ಬೆರಳುಗಳ ಪರೀಕ್ಷೆ ನಡೆಸಬಾರದು: ಸುಪ್ರೀಂಕೋರ್ಟ್‌

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಪಿಟಿಐ
Published 31 ಅಕ್ಟೋಬರ್ 2022, 13:37 IST
Last Updated 31 ಅಕ್ಟೋಬರ್ 2022, 13:37 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ : ‘ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿದೆಯೋ, ಇಲ್ಲವೊ ಎಂಬುದನ್ನು ಖಾತರಿಪಡಿಸಿಕೊಳ್ಳಲು ನಡೆಸಲಾಗುವ ‘ಎರಡು ಬೆರಳುಗಳ ಪರೀಕ್ಷೆ’ಯನ್ನು (ಟು ಫಿಂಗರ್‌ ಟೆಸ್ಟ್‌) ರದ್ದುಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ.

‘ಈ ಪರೀಕ್ಷೆ ವಿಧಾನವನ್ನು ಈಗಲೂ ಪಾಲಿಸಿಕೊಂಡು ಬರುತ್ತಿರುವುದು ದುರದೃಷ್ಟಕರ’ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.

‘ಎರಡು ಬೆರಳುಗಳ ಪರೀಕ್ಷೆಯನ್ನು ಇನ್ನು ಮುಂದೆ ನಡೆಸಕೂಡದು. ಈ ಪರೀಕ್ಷೆಯಿಂದ ಮಹಿಳೆಯರ ಘನತೆಗೆ ಚ್ಯುತಿ ಉಂಟಾಗುತ್ತದೆ. ಅವರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ್ದ ಜಾರ್ಖಂಡ್‌ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ ಜಾರ್ಖಂಡ್‌ ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಿತು. ಆರೋಪಿ ತಪ್ಪಿತಸ್ಥ ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿಯಿತು.

‘ಇನ್ನು ಮುಂದೆ ಈ ಪರೀಕ್ಷೆ ನಡೆಸುವಂತಿಲ್ಲ. ಇದನ್ನು ಪಾಲಿಸಲಾಗುತ್ತಿದೆಯೋ, ಇಲ್ಲವೊ ಎಂಬುದನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗಳುದೃಢಪಡಿಸಿಕೊಳ್ಳಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.

‘ಈ ಆದೇಶವನ್ನೂ ಮೀರಿ ಯಾರಾದರೂ ಈ ಪರೀಕ್ಷೆ ನಡೆಸಿದರೆ ಅಂತಹವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ’ ಎಂದೂ ಎಚ್ಚರಿಸಿದೆ.

‘ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಪಠ್ಯಕ್ರಮದಿಂದ ಎರಡು ಬೆರಳುಗಳ ಪರೀಕ್ಷೆಯ ವಿಷಯ ಹಾಗೂ ಅಧ್ಯಯನ ವಸ್ತುಗಳನ್ನು ತೆಗೆದು ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದೂ ನ್ಯಾಯಪೀಠವು ಕೇಂದ್ರ ಹಾಗೂ ರಾಜ್ಯ ಆರೋಗ್ಯ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.