ADVERTISEMENT

'ಸೋಂಕು ನಿವಾರಕ ಸುರಂಗಗಳನ್ನು ಏಕೆ ನಿಷೇಧಿಸಿಲ್ಲ'

ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್‌

ಪಿಟಿಐ
Published 7 ಸೆಪ್ಟೆಂಬರ್ 2020, 15:49 IST
Last Updated 7 ಸೆಪ್ಟೆಂಬರ್ 2020, 15:49 IST
ಸೋಂಕು ನಿವಾರಕ ಸುರಂಗ –ಸಾಂದರ್ಭಿಕ ಚಿತ್ರ 
ಸೋಂಕು ನಿವಾರಕ ಸುರಂಗ –ಸಾಂದರ್ಭಿಕ ಚಿತ್ರ    

ನವದೆಹಲಿ: ಕೊರೊನಾ ವೈರಾಣುವಿನ ಪಸರಿಸುವಿಕೆಯನ್ನು ತಡೆಯುವ ಸಲುವಾಗಿ ನಿರ್ಮಿಸಿರುವ ಸೋಂಕು ನಿವಾರಕ ಸುರಂಗಗಳು ಅಪಾಯಕಾರಿ ಎಂಬುದು ಗೊತ್ತಾದ ಮೇಲೂ ಅವುಗಳನ್ನು ಏಕೆ ನಿಷೇಧಿಸಿಲ್ಲ ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರವನ್ನು ಕೇಳಿದೆ.

ಸೋಂಕು ನಿವಾರಕ ಸುರಂಗಗಳು ಜನರನ್ನು ಅಪಾಯಕ್ಕೆ ತಳ್ಳುತ್ತಿವೆ. ಹೀಗಾಗಿ ಇವುಗಳ ಬಳಕೆ, ಸ್ಥಾಪನೆ, ಉತ್ಪಾದನೆ ಹಾಗೂ ಜಾಹೀರಾತುಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಗುರುಸಿಮ್ರನ್‌ ಸಿಂಗ್‌ ನರುಲಾ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌.ಸುಭಾಷ್‌ ರೆಡ್ಡಿ ಮತ್ತು ಎಂ.ಆರ್‌.ಶಾ ಅವರಿದ್ದ ತ್ರಿಸದಸ್ಯ ಪೀಠ ಸೋಮವಾರ ಅರ್ಜಿಯ ವಿಚಾರಣೆ ನಡೆಸಿತು.

ADVERTISEMENT

ಜನರನ್ನು ಸೋಂಕು ಮುಕ್ತಗೊಳಿಸಲು ಅತಿನೆರಳೆ ಕಿರಣಗಳನ್ನು ಬಳಸುವಂತೆ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳಲ್ಲಿ ಹೇಳಿಯೇ ಇಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಪೀಠಕ್ಕೆ ಮಾಹಿತಿ ನೀಡಿದರು.

ಮೈಮೇಲೆ ರಾಸಾಯನಿಕ ಸೋಂಕು ನಿವಾರಕಗಳ ಸಿಂಪಡಣೆಯಿಂದ ದೈಹಿಕ ಮತ್ತು ಮಾನಸಿಕ ಹಾನಿ ಉಂಟಾಗಬಹುದು ಎಂದೂ ಮೆಹ್ತಾ ತಿಳಿಸಿದರು.

‘ಸೋಂಕು ನಿವಾರಕ ಸುರಂಗಗಳು ಅಪಾಯಕಾರಿ ಎಂಬುದು ತಿಳಿದ ಮೇಲೆಯೂ ಕೇಂದ್ರ ಸರ್ಕಾರವು ಅವುಗಳನ್ನು ಏಕೆ ನಿಷೇಧಿಸುತ್ತಿಲ್ಲ’ ಎಂದು ಪೀಠವು ಮೆಹ್ತಾ ಅವರನ್ನು ಪ್ರಶ್ನಿಸಿತು.

‘ಈ ಸಂಬಂಧ ಸೂಕ್ತ ನಿರ್ದೇಶನ ನೀಡಲಾಗುವುದು’ ಎಂದು ಮೆಹ್ತಾ ಹೇಳಿದರು.

‘ಕೇಂದ್ರ ಸರ್ಕಾರವು ಜಾರಿಗೊಳಿಸುವ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸುವುದು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಜವಾಬ್ದಾರಿಯಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವು ಸೀಮಿತವಾದುದು’ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.