ADVERTISEMENT

ಮನೋಜ್ ತಿವಾರಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ‘ಸುಪ್ರೀಂ’ನಿಂದ ಮುಕ್ತಿ

ಪಿಟಿಐ
Published 22 ನವೆಂಬರ್ 2018, 12:24 IST
Last Updated 22 ನವೆಂಬರ್ 2018, 12:24 IST
   

ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಗುರುವಾರ ಮುಕ್ತಾಯಗೊಳಿಸಿದೆ. ನ್ಯಾಯಾಲಯ ನೇಮಿಸಿರುವ ಸಮಿತಿಯ ವಿರುದ್ಧ ಸಲ್ಲದ ಆರೋಪ ಮಾಡಿದ ಅವರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ದೆಹಲಿಯ ಗೋಲಕ್‌ಪುರಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳಿಗೆ ಸರ್ಕಾರ ಬೀಗಮುದ್ರೆ ಹಾಕಿತ್ತು. ದೆಹಲಿಯ ಸಂಸದರೂ ಆಗಿರುವ ತಿವಾರಿ ಬೀಗಮುದ್ರೆಯನ್ನು ತೆರವು ಮಾಡಿದ್ದರು ಎಂದು ಸುಪ್ರೀಂಕೋರ್ಟ್ ನೇಮಿಸಿರುವ ಮೇಲುಸ್ತುವಾರಿ ಸಮಿತಿಯು ವರದಿ ಸಲ್ಲಿಸಿತ್ತು. ಸೆಪ್ಟೆಂಬರ್ 19ರಂದು ತಿವಾರಿ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತ್ತು. ಪೂರ್ವ ದೆಹಲಿ ಪಾಲಿಕೆಯು ಎಫ್‌ಐಆರ್ ದಾಖಲಿಸಿತ್ತು.

‘ಒಬ್ಬ ಜನಪ್ರತಿನಿಧಿಯಾಗಿ ತಿವಾರಿ ಮಾಡಿದ ಕೆಲಸದಿಂದ ತುಂಬಾ ನೋವಾಗಿದೆ. ಕಾನೂನನ್ನು ಕೈಗೆತ್ತಿಕೊಂಡಿದ್ದು ಸರಿಯಲ್ಲ’ ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ನೇತೃತ್ವದ ಪೀಠ ಹೇಳಿತು.

ADVERTISEMENT

ಸಮಿತಿಯು ದೆಹಲಿ ಜನರಲ್ಲಿ ಭಯ ಉಂಟುಮಾಡುತ್ತಿದ್ದು,ತನ್ನ ವ್ಯಾಪ್ತಿ ಮೀರಿ ವರ್ತಿಸುತ್ತಿದೆ ಎಂದು ವಿಚಾರಣೆ ವೇಳೆ ತಿವಾರಿ ಆರೋಪಿಸಿದ್ದರು. ತಿವಾರಿ ಅವರು ಕೋರ್ಟನ್ನು ರಾಜಕೀಯ ರಣರಂಗ ಮಾಡಲೆತ್ನಿಸುತ್ತಿದ್ದಾರೆ ಎಂದು ಸಮಿತಿ ಆರೋಪಿಸಿತ್ತು. ಅಕ್ಟೋಬರ್ 30ರಂದು ಆದೇಶವನ್ನು ಕಾಯ್ದಿರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.