ADVERTISEMENT

ಭೂಪರಿವರ್ತನೆಗೆ ಅವಕಾಶ ಕೊಡಬೇಡಿ: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:08 IST
Last Updated 26 ಆಗಸ್ಟ್ 2019, 20:08 IST
   

ನವದೆಹಲಿ: ‘ಭೂ ಮಾಫಿಯಾದ ಮರ್ಜಿಗೆ ಅನುಗುಣವಾಗಿ ಬೆಂಗಳೂರಿನಲ್ಲಿ ಭೂಸ್ವಾಧೀನ ಮತ್ತು ಡಿನೋಟಿಫಿಕೇಶನ್‌ ನಡೆಯುತ್ತಿದ್ದು, ಇನ್ನು ಮುಂದೆ ಈ ರೀತಿಯ ಭೂ ಪರಿವರ್ತನೆಗೆ ಅವಕಾಶ ನೀಡಬಾರದು' ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಕರ್ನಾಟಕ ಸರ್ಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿಗೆ ಸೂಚನೆ ನೀಡಿದೆ.

ಒಂದು ಕಾಲದಲ್ಲಿ ಸುಂದರ ನಗರವಾಗಿದ್ದ ಬೆಂಗಳೂರನ್ನು ಅಭಿವೃದ್ಧಿಯ ಹೆಸರಿನಲ್ಲಿ ಟ್ರಾಫಿಕ್‌ ಜಾಮ್‌, ಜನಸಂಖ್ಯಾ ದಟ್ಟಣೆ, ಅಡ್ಡಾದಿಡ್ಡಿ ಕಟ್ಟಡಗಳ ನಗರವನ್ನಾಗಿ ಮಾಡಲಾಗಿದೆ. ಇಲ್ಲಿನ ಕೆರೆಗಳು ಸಾಯುತ್ತಿವೆ. ಮುಕ್ತ ಪ್ರದೇಶದ ವ್ಯಾಪ್ತಿ ಕುಸಿಯುತ್ತಿದೆ, ಮರಗಳ ಹನನವಾಗುತ್ತಿದೆ... ಇವೆಲ್ಲವೂ ಬೆಂಗಳೂರು ನಗರದ ಒಟ್ಟಾರೆ ಅಂದಕ್ಕೆ ಹಾನಿ ಉಂಟುಮಾಡಿವೆ. ಬೆಂಗಳೂರಿನ ತಂಪು ಮತ್ತು ಸ್ವಚ್ಛ ಗಾಳಿ ಈಗ ಹೊಗೆ ಮತ್ತು ದೂಳು ಮಿಶ್ರಿತ ಗಾಳಿಯಾಗಿದೆ ಎಂದು ಕೋರ್ಟ್‌ ಹೇಳಿದೆ.

ಈಗ ಎಷ್ಟೇ ಪ್ರಯತ್ನ ಮಾಡಿದರೂ ಬೆಂಗಳೂರಿನ ಹಳೆಯ ಸೌಂದರ್ಯವನ್ನು ಮರಳಿ ತರಲಾಗದು. ಆದರೆ, ಈಗಲೇ ಎಚ್ಚೆತ್ತುಕೊಂಡು ಯೋಜನಾಬದ್ಧವಾಗಿ ನಗರವನ್ನು ಅಭಿವೃದ್ಧಿಪಡಿಸಿದರೆ ಇರುವ ಸೌಂದರ್ಯವನ್ನಾದರೂ ಉಳಿಸಬಹುದು ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎಸ್‌. ಅಬ್ದುಲ್‌ ನಜೀರ್‌ ಹಾಗೂ ಎಂ.ಆರ್‌ ಶಾ ಅವರ ತ್ರಿಸದಸ್ಯ ಪೀಠ ಹೇಳಿತು.

ADVERTISEMENT

ಲೇಔಟ್‌ ನಿರ್ಮಾಣವನ್ನು ಕುರಿತು ವಿನಾಯಕ ಗೃಹನಿರ್ಮಾಣ ಸಹಕಾರ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಲಯವು, ‘ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಯಾವುದೇ ಭೂಮಿಯನ್ನು ಕೈಬಿಡುವುದಾಗಲಿ, ಡಿನೋಟಿಫೈ ಮಾಡುವುದಾಗಲಿ ಸರ್ಕಾರ ಮಾಡಬಾರದು. ಭೂಮಿಯನ್ನು ಡಿನೋಟಿಫೈ ಮಾಡಬೇಕಾದರೆ ಆ ಭೂಮಿಯನ್ನು ಕಡ್ಡಾಯವಾಗಿ ಉದ್ದೇಶಿತ ಯೋಜನೆಗೆ ಅನುಗುಣವಾಗಿಯೇ ಬಳಕೆ ಮಾಡಬೇಕು. ಬಿಡಿಎ ಸೇರಿದಂತೆ ಕರ್ನಾಟಕದ ಯೋಜನೆ ಅಥವಾ ಅಭಿವೃದ್ಧಿ ಪ್ರಾಧಿಕಾರಗಳು ಇನ್ನು ಮುಂದೆ ಯಾವ ಕಾರಣಕ್ಕೂ ಬಡಾವಣೆಯೊಳಗಿನ, ಅಥವಾ ಖಾಸಗಿ ಬಡಾವಣೆಯೊಳಗಿನ ಭೂಮಿಯನ್ನು ಉದ್ದೇಶಿತ ಯೋಜನೆಯಲ್ಲದೆ ಬೇರೆ ಉದ್ದೇಶಕ್ಕೆ ಬಳಸಲು ಅವಕಾಶವನ್ನು ನೀಡಲೇಬಾರದು ಎಂಬುದನ್ನು ನಾವಿಲ್ಲಿ ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ’ ಎಂದಿದೆ.

ಪಾರ್ಕ್‌, ಆಟದ ಮೈದಾನ ಅಥವಾ ಬೇರೆ ಸಾರ್ವಜನಿಕ ಉದ್ದೇಶಕ್ಕೆಂದು ಮೀಸಲಿಟ್ಟ ಜಾಗವನ್ನು ಕಡ್ಡಾಯವಾಗಿ ಆ ಉದ್ದೇಶಕ್ಕೇ ಬಳಕೆ ಮಾಡಬೇಕು ಎಂದು ಸೂಚಿಸಿರುವ ನ್ಯಾಯಾಲಯವು ಇದನ್ನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.