ನವದೆಹಲಿ: ಅನಿಲ್ ದೇಶಮುಖ್ ಅವರು ಮಹಾರಾಷ್ಟ್ರದ ಗೃಹ ಸಚಿವರಾಗಿದ್ದ ಅವಧಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವರ್ಗಾವಣೆ ಮತ್ತು ಹುದ್ದೆ ನಿಯೋಜನೆಗೆ ಸಂಬಂಧಿಸಿದಂತೆ ಸಿಬಿಐ ಕೈಗೊಂಡಿರುವ ತನಿಖೆ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಬಗ್ಗೆ ಬಾಂಬೆ ಹೈಕೋರ್ಟ್ ಜುಲೈ 22ರಂದು ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರನ್ನೊಳಗೊಂಡ ಪೀಠವು ತಿಳಿಸಿತು.
‘ಆರೋಪಕ್ಕೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆಯೂ ಸಿಬಿಐ ಸಮಗ್ರವಾಗಿ ತನಿಖೆ ಮಾಡಬೇಕು. ಸೀಮಿತ ವಿಷಯಗಳ ಬಗ್ಗೆ ಮಾತ್ರ ತನಿಖೆ ಕೈಗೊಳ್ಳುವಂತೆ ಸಿಬಿಐ ಅನ್ನು ನಿಯಂತ್ರಿಸುವುದಿಲ್ಲ. ಹೈಕೋರ್ಟ್ ಆದೇಶ ಪಾಲಿಸಬೇಕು. ಇಲ್ಲದಿದ್ದರೆ, ಸಾಂವಿಧಾನಿಕ ನ್ಯಾಯಾಲಯದ ಅಧಿಕಾರವನ್ನು ಕಡಿಮೆ ಮಾಡಿದಂತಾಗುತ್ತದೆ’ ಎಂದು ಪೀಠವು ಅಭಿಪ್ರಾಯಪಟ್ಟಿತು.
‘ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವರ್ಗಾವಣೆ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಸಚಿನ್ ವಾಜೆ ಮರುನೇಮಕಕ್ಕೆ ಸಂಬಂಧಿಸಿದಂತೆ ತನಿಖೆಗೆ ಅವಕಾಶ ನೀಡುತ್ತಿಲ್ಲ. ಈ ಮೂಲಕ ರಾಜ್ಯ ಸರ್ಕಾರವು ಮಾಜಿ ಗೃಹ ಸಚಿವರನ್ನು ರಕ್ಷಿಸುತ್ತಿದೆ ಎನ್ನುವ ಭಾವನೆ ಸೃಷ್ಟಿಯಾಗುತ್ತಿದೆ’ ಎಂದು ಪೀಠವು ಹೇಳಿದೆ.
ಪೊಲೀಸ್ ಸಿಬ್ಬಂದಿಯ ವರ್ಗಾವಣೆ ಮತ್ತು ಹುದ್ದೆ ನಿಯೋಜನೆ ಹಾಗೂ ಸಚಿನ್ ವಾಜೆ ಮರುನೇಮಕಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮಾಡಬಹುದು ಎಂದು ಬಾಂಬೆ ಹೈಕೋರ್ಟ್ ಜುಲೈ 22ರಂದು ಆದೇಶ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.