ADVERTISEMENT

ಹೈಕೋರ್ಟ್ ನ್ಯಾಯಮೂರ್ತಿ ನೇಮಕಾತಿಯಲ್ಲಿ ಹಿರಿತನ ಕಡೆಗಣನೆ ಆರೋಪ: ಅರ್ಜಿ ವಜಾ

ಪಿಟಿಐ
Published 4 ಮೇ 2020, 18:50 IST
Last Updated 4 ಮೇ 2020, 18:50 IST
   

ನವದೆಹಲಿ: ‘ಹಿರಿತನ ಕಡೆಗಣಿಸಿ, ತಮಗಿಂತಲೂ ಕಿರಿಯರಾದ ನ್ಯಾಯಾಧೀಶರನ್ನು ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿದೆ. ಹೀಗಾಗಿ, ಅವರ ಪ್ರಮಾಣವಚನಕ್ಕೆ ತಡೆ ನೀಡಬೇಕು’ ಎಂದು ಕೋರಿ ಜಿಲ್ಲಾ ನ್ಯಾಯಾಧೀಶರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಪದ್ಮರಾಜ್‌ ಎನ್‌. ದೇಸಾಯಿ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಯನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಶಿವಮೊಗ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶ ಆರ್‌ಕೆಜಿಎಂಎಂ ಮಹಾಸ್ವಾಮೀಜಿ ಅವರು ಈ ಅರ್ಜಿ ಸಲ್ಲಿಸಿದ್ದರು.

ಪದ್ಮರಾಜ್‌ ಎನ್‌. ದೇಸಾಯಿ ಅವರು ಪ್ರಮಾಣ ವಚನ ಸ್ವೀಕರಿಸುವ ಕೇವಲ ಅರ್ಧ ಗಂಟೆ ಮುನ್ನ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿತು.

ADVERTISEMENT

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಮತ್ತು ಅನಿರುದ್ಧ ಬೋಸ್‌ ಅವರನ್ನೊಳಗೊಂಡ ಪೀಠವು ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಬೆಳಿಗ್ಗೆ 10 ಗಂಟೆಗೆ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಆದರೆ, ಕೊನೆಯ ಕ್ಷಣದಲ್ಲಿ ಇಂತಹ ಅರ್ಜಿಗಳ ವಿಚಾರಣೆ ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳ ನೇಮಕಾತಿ ವಿಷಯದಲ್ಲಿ ರಾಷ್ಟ್ರಪತಿಗಳು ಹೊರಡಿಸುವ ಆದೇಶದ ಬಗ್ಗೆ ಸಾಮಾನ್ಯವಾಗಿ ಕೊನೆಯ ಕ್ಷಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತು ಎಂದು ಅರ್ಜಿದಾರರ ಪರ ವಕೀಲ ಸಂಜಯ್‌ ನುಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.