ADVERTISEMENT

‘ದುರ್ಬಲ ಸಾಕ್ಷಿ’: ‘ಸುಪ್ರೀಂ’ನಿಂದ ಮರು ವ್ಯಾಖ್ಯಾನ

ಪಿಟಿಐ
Published 12 ಜನವರಿ 2022, 3:50 IST
Last Updated 12 ಜನವರಿ 2022, 3:50 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿ ‘ದುರ್ಬಲ ಸಾಕ್ಷಿ’ಗಳ ಅರ್ಥವಿವರಣೆಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಿಸ್ತರಿಸಿ ಮಹತ್ವದ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌, ಸೂರ್ಯಕಾಂತ ಅವರಿರುವ ನ್ಯಾಯಪೀಠ, ‘ದುರ್ಬಲ ಸಾಕ್ಷಿ’ಗಳ ಅರ್ಥದ ಮರುವ್ಯಾಖ್ಯಾನ ಮಾಡಿದೆ. ‘ವಾಕ್‌ ಅಥವಾ ಶ್ರವಣ ದೋಷವುಳ್ಳ ವ್ಯಕ್ತಿ, ಅಥವಾ ಸಕ್ಷಮ ಕೋರ್ಟ್‌ ಒಪ್ಪಬಹುದಾಂತಹ ವೈಕಲ್ಯ ಹೊಂದಿರುವ ವ್ಯಕ್ತಿಯನ್ನು ‘ದುರ್ಬಲ ಸಾಕ್ಷಿ’ ಎಂಬುದಾಗಿ ಪರಿಗಣಿಸಬಹುದು’ ಎಂದು ನ್ಯಾಯಪೀಠ ಹೇಳಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಹಾಗೂ ಮಾನಸಿಕ ಕಾಯಿಲೆಯಿಂದ ಬಳಲುವವರು ಸಹ ಈ ಮರುವ್ಯಾಖ್ಯಾನದ ಪ್ರಕಾರ ಈಗ ‘ದುರ್ಬಲ ಸಾಕ್ಷಿ’ಗಳ ವ್ಯಾಪ್ತಿಗೆ ಒಳಪಡುತ್ತಾರೆ.

ADVERTISEMENT

‘ದುರ್ಬಲ ಸಾಕ್ಷಿ’ಗಳು ನೀಡುವ ಹೇಳಿಕೆಗಳನ್ನು ದಾಖಲಿಸಲು ಸುರಕ್ಷಿತ ಹಾಗೂ ಮುಕ್ತ ವಾತಾವರಣವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು. ಇದಕ್ಕಾಗಿ ಎರಡು ತಿಂಗಳ ಒಳಗಾಗಿ ಎಲ್ಲ ಹೈಕೋರ್ಟ್‌ಗಳು ‘ದುರ್ಬಲ ಸಾಕ್ಷಿಗಳು ಸಾಕ್ಷ್ಯ ನುಡಿಯುವ ಕೇಂದ್ರ’ಗಳನ್ನು (ವಿಡಬ್ಲ್ಯುಡಿಸಿ) ಸ್ಥಾಪಿಸುವ ಯೋಜನೆ ಜಾರಿಗೊಳಿಸಬೇಕು. ಈ ಸಂಬಂಧ ಅಧಿಸೂಚನೆ ಹೊರಡಿಸಬೇಕು’ ಎಂದೂ ನ್ಯಾಯಪೀಠ ನಿರ್ದೇಶನ ನೀಡಿತು.

ವಿಡಬ್ಲ್ಯುಡಿಸಿ ರಚನೆ, ಯೋಜನೆಯ ಅನುಷ್ಠಾನ, ತರಬೇತಿ ಕಾರ್ಯಕ್ರಮದ ಉಸ್ತುವಾರಿಗಾಗಿ ರಚಿಸಿರುವ ಸಮಿತಿಗೆ ಜಮ್ಮು–ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ನ್ಯಾಯಪೀಠ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.