ADVERTISEMENT

ವರ್ಚುವಲ್ ವ್ಯವಸ್ಥೆ ಬಗ್ಗೆ ‘ಸುಪ್ರೀಂ‘ ಅಸಮಾಧಾನ: ಸರಿಪಡಿಸಲು ಸೂಚನೆ

ವಿಚಾರಣೆ ವೇಳೆ ಸಂಪರ್ಕ ಕಡಿತ, ಸರಿಯಾಗಿ ಧ್ವನಿ ಕೇಳಿಸದಿರುವುದು

ಪಿಟಿಐ
Published 6 ಜನವರಿ 2021, 8:08 IST
Last Updated 6 ಜನವರಿ 2021, 8:08 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ವರ್ಚುವಲ್ ವ್ಯವಸ್ಥೆ ಮೂಲಕ ನಡೆಯುತ್ತಿರುವ ವಿಚಾರಣೆಗಳು ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಇದೇ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ವಿಚಾರಣೆ ಮುಂದುವರಿಸುವುದು ತುಂಬಾ ಕಷ್ಟ ಎಂದು ಹೇಳಿದೆ.

ಆದರೆ, ಸುಪ್ರೀಂ ಕೋರ್ಟ್‌ ಪಕ್ಕದಲ್ಲೇ ಇರುವ ದೆಹಲಿ ಹೈಕೋರ್ಟ್‌ನಲ್ಲೂ ವರ್ಚುವಲ್‌ ವ್ಯವಸ್ಥೆಯಲ್ಲೇ ಕಾರ್ಯಕಲಾಪಗಳು ನಡೆಯುತ್ತಿದ್ದು, ಅಲ್ಲಿ ಈ ವ್ಯವಸ್ಥೆಯಿಂದ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನೂ ನ್ಯಾಯಾಲಯ ಗಮನಿಸಿದೆ.

‘ದೆಹಲಿ ಹೈಕೋರ್ಟ್‌ನಲ್ಲಿ ಈ ವರ್ಚುವಲ್ ವ್ಯವಸ್ಥೆಯಿಂದ ಯಾವುದೇ ಸಮಸ್ಯೆ ಸೃಷ್ಟಿಯಾಗದಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸುವುದು ಕಷ್ಟ ಎಂಬುದನ್ನು ಆರಂಭದಲ್ಲೇ ಹೇಳಿರುವುದಾಗಿ‘ ನ್ಯಾಯಮೂರ್ತಿ ಸಂಜಯ್‌ ಕಿಶನ್ ಕೌಲ್ ಅವರ ನೇತೃತ್ವದ ಪೀಠ ಜನವರಿ 5ರಂದು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದೆ.

ADVERTISEMENT

‘ವಾದ–ಪ್ರತಿವಾದದ ಸಂದರ್ಭದಲ್ಲೂ ಇಂಟರ್ನೆಟ್ ಸಂಪರ್ಕ ಕಡಿತದಂತಹ ಸಮಸ್ಯೆ ಎದುರಿಸುತ್ತಿದ್ದೇವೆ. ಮಾತುಗಳು ಪ್ರತಿಧ್ವನಿಯಂತೆ ಕೇಳಿಸುತ್ತವೆ. ನಿನ್ನೆಯಿಂದ ಈ ಸಮಸ್ಯೆಗಳು ತೀವ್ರವಾಗಿವೆ‘ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ ರಾಯ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ. ಈ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಕಳೆದ ವರ್ಷದ ಮಾರ್ಚ್‌ನಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.