ADVERTISEMENT

ಮಥುರಾ: ಮಸೀದಿ ಸಂಕೀರ್ಣ ಸಮೀಕ್ಷೆ ತಡೆ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 15 ಏಪ್ರಿಲ್ 2024, 15:56 IST
Last Updated 15 ಏಪ್ರಿಲ್ 2024, 15:56 IST
ಶಾಹಿ ಈದ್ಗಾ ಮಸೀದಿ (ಪಿಟಿಐ ಚಿತ್ರ)
ಶಾಹಿ ಈದ್ಗಾ ಮಸೀದಿ (ಪಿಟಿಐ ಚಿತ್ರ)   

ನವದೆಹಲಿ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇಗುಲ‌ಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆ ನಡೆಸುವಂತೆ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ವಿಧಿಸಿದ್ದ ತಡೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಿಸ್ತರಿಸಿದೆ.

‘ವಿವಾದಕ್ಕೆ ಸಂಬಂಧಿಸಿ ಮಥುರಾ ನ್ಯಾಯಾಲಯದಲ್ಲಿ ಬಾಕಿ ಇರುವ ಎಲ್ಲ ಅರ್ಜಿಗಳನ್ನು ವರ್ಗಾಯಿಸುವಂತೆ 2023ರ ಮೇ 26ರಂದು ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸೇರಿದಂತೆ ಮಸೀದಿಯ ಆಡಳಿತ ಮಂಡಳಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಆಗಸ್ಟ್‌ 5ರ ಬಳಿಕ ವಿಚಾರಣೆ ನಡೆಸುವುದಾಗಿ’ ನ್ಯಾಯಾಮೂರ್ತಿ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತ ಅವರಿದ್ದ ನ್ಯಾಯಪೀಠವು ತಿಳಿಸಿದೆ.

‘ಎಲ್ಲ ಮಧ್ಯಂತರ ಆದೇಶಗಳು ಮುಂದುವರಿಯಲಿದ್ದು, ಆಗಸ್ಟ್‌ 5ರ ಬಳಿಕ ಎಲ್ಲ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಾಗುವುದು‘ ಎಂದು ನ್ಯಾಯಾಲಯ ತಿಳಿಸಿದೆ.

ADVERTISEMENT

ಶಾಹಿ ಈದ್ಗಾ ಮಸೀದಿ ಅವರಣದಲ್ಲಿ ನ್ಯಾಯಾಲಯದ ಸುಪರ್ದಿಯಲ್ಲಿ ಸಮೀಕ್ಷೆ ನಡೆಸುವಂತೆ 2023ರ ಡಿಸೆಂಬರ್‌ 14ರಂದು ಹೈಕೋರ್ಟ್‌ ಆದೇಶಿಸಿತ್ತು. ಇದಕ್ಕಾಗಿ ಕೋರ್ಟ್‌ ಕಮಿಷನರ್‌ ಅವರನ್ನು ನೇಮಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿಯು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್‌ 2024 ಜನವರಿ 16ರಂದು ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿತ್ತು.

ಮಥುರಾದಲ್ಲಿರುವ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್‌ಗೆ ಸೇರಿದ 13.37 ಎಕರೆ ಜಾಗದಲ್ಲಿ ಶಾಹಿ – ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದ್ದು, ಅದನ್ನು ಸ್ಥಳಾಂತರಗೊಳಿಸಬೇಕು ಎಂದು ಹಿಂದೂಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಹಿಂದೂಗಳ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಮಸೀದಿಯ ಆಡಳಿತ ಮಂಡಳಿಯು ಅರ್ಜಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.