ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಿಗೆ ನೀತಿ ರೂಪಿಸಿ: ಸುಪ್ರೀಂ ಕೋರ್ಟ್‌ ನಿರ್ದೇಶನ

ಮಹತ್ವದ ತೀರ್ಪಿನಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಪಿಟಿಐ
Published 17 ಅಕ್ಟೋಬರ್ 2025, 16:06 IST
Last Updated 17 ಅಕ್ಟೋಬರ್ 2025, 16:06 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ 2019ರಲ್ಲಿ ಕಾನೂನು ಜಾರಿಯಾದರೂ ಆ ಸಮುದಾಯದವರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

ಶುಕ್ರವಾರ ಪ್ರಕಟಿಸಿದ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರ ಸಮಸ್ಯೆಗಳನ್ನು ಬಗೆಹರಿಸಲು ಹೊಸ ನೀತಿಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ‘2019ರ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ’ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳು ಕಡತಗಳಲ್ಲಿ ಮಾತ್ರ ಉಳಿದಿವೆ’ ಎಂದು ಹೇಳಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಯ್ದೆ ಜಾರಿ ಬಗ್ಗೆ ‘ತೀವ್ರ ನಿರಾಸಕ್ತಿ’ಯ ಮನೋಭಾವ ಪ್ರದರ್ಶಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ADVERTISEMENT

ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಆಶಾ ಮೆನನ್ ನೇತೃತ್ವದ ಸಲಹಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿತು. 

ಈ ತೀರ್ಪು ಹೊರಬಂದ ದಿನಾಂಕದಿಂದ ಆರು ತಿಂಗಳ ಒಳಗಾಗಿ ವರದಿ ಅಥವಾ ಕರಡು ನೀತಿಯನ್ನು ಸಿದ್ಧಪಡಿಸುವಂತೆ ಪೀಠವು ಸಮಿತಿಗೆ ಸೂಚಿಸಿತು. ಸಮಿತಿಯು ವರದಿ ಸಲ್ಲಿಸಿದ ಮೂರು ತಿಂಗಳ ಒಳಗಾಗಿ ತನ್ನದೇ ಆದ ‘ಸಮಾನ ಅವಕಾಶ ನೀತಿ’ಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

‘ಲಿಂಗತ್ವ ಅಲ್ಪಸಂಖ್ಯಾತರು ತಾರತಮ್ಯವನ್ನು ಎದುರಿಸುತ್ತಲೇ ಇದ್ದಾರೆ. ಆರೋಗ್ಯ ರಕ್ಷಣೆ, ಆರ್ಥಿಕ ಅವಕಾಶಗಳು ಮತ್ತು ಶೈಕ್ಷಣಿಕ ನೀತಿಯಿಂದ ಹೊರಗೆ ಇಟ್ಟಿರುವುದು ಅವರ ಸಂಕಷ್ಟ ಹೆಚ್ಚಲು ಕಾರಣವಾಗಿದೆ’ ಎಂದು ಹೇಳಿತು. 

ಉದ್ಯೋಗದಲ್ಲಿ ಎದುರಿಸಿದ ತಾರತಮ್ಯ ಮತ್ತು ಅವಮಾನದಿಂದ ನೊಂದ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಉತ್ತರ ಪ್ರದೇಶ ಮತ್ತು ಗುಜರಾತ್‌ನ ಎರಡು ಖಾಸಗಿ ಶಾಲೆಗಳಿಂದ ತಮ್ಮನ್ನು ವಜಾಗೊಳಿಸಲಾಯಿತು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.

ಕೇಂದ್ರ, ಉತ್ತರ ಪ್ರದೇಶ ಮತ್ತು ಗುಜರಾತ್‌ ಸರ್ಕಾರಗಳು ಹಾಗೂ ಗುಜರಾತ್‌ನ ಶಾಲೆಯು ಅರ್ಜಿದಾರರಿಗೆ ತಲಾ ₹50 ಸಾವಿರ ಪರಿಹಾರ ನೀಡುವಂತೆಯೂ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.