ನವದೆಹಲಿ: ಅಶೋಕ ವಿಶ್ವವಿದ್ಯಾಲಯದ ಪ್ರೊ.ಅಲಿಖಾನ್ ಮಹಮೂದಾಬಾದ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಆದರೆ, ಆಪರೇಷನ್ ಸಿಂಧೂರ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬಂಧನಕ್ಕೊಳಗಾಗಿದ್ದ ಪ್ರೊಫೆಸರ್ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಐಜಿ ಶ್ರೇಣಿಯ ಅಧಿಕಾರಿ ಮತ್ತು ಎಸ್‌ಪಿ ಶ್ರೇಣಿಯ ಮಹಿಳಾ ಅಧಿಕಾರಿ ಸೇರಿದಂತೆ ಮೂವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) 24 ಗಂಟೆಗಳೊಳಗಾಗಿ ರಚಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೇಶ್ವರ ಸಿಂಗ್ ಅವರನ್ನೊಳಗೊಂಡ ಪೀಠವು ಹರಿಯಾಣ ಡಿಜಿಪಿಗೆ ನಿರ್ದೇಶಿಸಿದೆ.
ಪ್ರೊಫೆಸರ್ ಅವರ ಪೋಸ್ಟ್‌ಗಳನ್ನು ಪರಾಮರ್ಶಿಸಿದ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಶ ಬರೆಯಕೂಡದು ಎಂದು ತಾಕೀತು ಮಾಡಿತು.
ಎಸ್‌ಐಟಿ ತನಿಖೆಗೆ ಸಹಕರಿಸುವಂತೆ ಸೂಚಿಸಿರುವ ನ್ಯಾಯಾಲಯವು ಪಾಸ್‌ಪೋರ್ಟ್ ಒಪ್ಪಿಸುವಂತೆ ನಿರ್ದೇಶಿಸಿದೆ.
ಅಲಿಖಾನ್‌ಗೆ ಸೋನಿಪತ್‌ನ ನ್ಯಾಯಾಲಯವು ಮಂಗಳವಾರ ಮೇ 27ರವರೆಗೂ ನ್ಯಾಯಾಂಗ ಬಂಧನ ವಿಧಿಸಿತ್ತು.
ಆಯೋಗದಿಂದ ನೋಟಿಸ್: ಪ್ರೊಫೆಸರ್ ಬಂಧನದ ಬಗ್ಗೆ ವಾರದೊಳಗೆ ವರದಿ ನೀಡುವಂತೆ ಹರಿಯಾಣ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ತಿಳಿಸಿದೆ.
ಮಾಧ್ಯಮ ವರದಿಗಳ ಆಧಾರದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದ್ದು, ಸ್ವಯಂಪ್ರೇರಿತವಾಗಿ ಈ ಪ್ರಕರಣ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದೆ.
ಸಮಾಧಾನಕರ
ಸೋನಿಪತ್ (ಹರಿಯಾಣ): ಪ್ರೊಫೆಸರ್‌ಗೆ ಜಾಮೀನು ಸಿಕ್ಕಿದ್ದು ‘ಸಮಾಧಾನಕರ’ ಮತ್ತು ‘ಹೃದಯಸ್ಪರ್ಶಿ’ಯಾಗಿದೆ ಎಂದು ಅಶೋಕ ವಿಶ್ವವಿದ್ಯಾಲಯ ಹೇಳಿದೆ.
‘ಜಾಮೀನು ದೊರೆತಿದ್ದರಿಂದ ಅಲಿಖಾನ್ ಕುಟುಂಬಕ್ಕೆ ಹಾಗೂ ವಿಶ್ವವಿದ್ಯಾಲಯದ ನಮ್ಮೆಲ್ಲರಲ್ಲೂ ಸಮಾಧಾನ ಮೂಡಿದೆ’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.