ADVERTISEMENT

ಕೋವಿಡ್ ನಿರ್ವಹಣೆ: ಸುಪ್ರೀಂ ಮಧ್ಯಪ್ರವೇಶಿಸುವ ಅಗತ್ಯವಿರಲಿಲ್ಲ -ಕಾಂಗ್ರೆಸ್

ಪಿಟಿಐ
Published 23 ಏಪ್ರಿಲ್ 2021, 12:56 IST
Last Updated 23 ಏಪ್ರಿಲ್ 2021, 12:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ದೇಶದಲ್ಲಿ ಕೋವಿಡ್‌–19 ಪರಿಸ್ಥಿತಿಯ ನಿರ್ವಹಣೆ ಕುರಿತು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶಿಸುವ ಅಗತ್ಯ ಇರಲಿಲ್ಲ ಮತ್ತು ಇದು ಸರಿಯಾದುದಲ್ಲ ಎಂದು ಕಾಂಗ್ರೆಸ್ ಪಕ್ಷ ಪ್ರತಿಪಾದಿಸಿದೆ. ‘ಇದು, ನ್ಯಾಯಾಂಗ ಅಧಿಕಾರದ ಕೇಂದ್ರೀಕರಣವಾಗಲಿದೆ’ ಎಂದು ಆರೋಪಿಸಿದೆ.

ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಘ್ವಿ, ‘ಹೈಕೋರ್ಟ್‌ಗಳು ಪರಿಣಾಮಕಾರಿಯಾಗಿ ನಾಗರಿಕ ಹಕ್ಕುಗಳನ್ನು ಎತ್ತಿ ಹಿಡಿಯುತ್ತಿವೆ ಮತ್ತು ಸರ್ಕಾರಗಳನ್ನುಸರಿಯಾದ ಕ್ರಮದಲ್ಲಿ ಹೊಣೆಗಾರರನ್ನಾಗಿ ಮಾಡುತ್ತಿವೆ. ಹಂತ ಹಂತವಾಗಿ ಪ್ರಕರಣ ಕೈಗೆತ್ತಿಕೊಂಡು ನಿರ್ವಹಿಸುತ್ತಿವೆ. ಅವುಗಳು ಕೆಲಸ ಮಾಡಲು ಬಿಡಬೇಕು’ ಎಂದು ಪ್ರತಿಪಾದಿಸಿದರು.

‘ಸುಪ್ರೀಂ ಕೋರ್ಟ್‌ ಈ ವಿಷಯ ಕುರಿತಂತೆ ಏ. 22ರಂದು ಮಧ್ಯ ಪ್ರವೇಶಿಸಬೇಕಾದ ಅಗತ್ಯ ಇರಲಿಲ್ಲ. ಇದು ತಪ್ಪು, ತಪ್ಪು ಮತ್ತು ತಪ್ಪು. ಸುಪ್ರಿಂ ಕೋರ್ಟ್‌ ಇದು ಸ್ವಯಂಪ್ರೇರಿತವಾಗಿ ಕೈಗೊಂಡ ಕ್ರಮವಲ್ಲ. ಹೈಕೋರ್ಟ್‌ ಆದೇಶಗಳಿಗೆ ನೀಡಿದ ಪ್ರತಿಕ್ರಿಯೆಯಾಗಿದೆ. ಹೀಗಾಗಿ ಇದು ತಪ್ಪು’ ಎಂದು ಅವರು ಹೇಳಿದರು.

ADVERTISEMENT

ಇದು ತಪ್ಪು, ಏಕೆಂದರೆ ಹೈಕೋರ್ಟ್‌ ಏನು ಮಾಡಿದೆಯೋ ಅದನ್ನು ಸುಪ್ರಿಂ ಕೋರ್ಟ್‌ ಮಾಡಿರಲಿಲ್ಲ. ಆಮ್ಲಜನಕ ಕುರಿತಂತೆ ದೆಹಲಿ ಹೈಕೋರ್ಟ್‌ ರಾತ್ರಿ 9 ಗಂಟೆಗೆ ಕೈಗೊಡ ಕ್ರಮ ಅನೇಕ ಜನರಿಗೆ ಸಮಾಧಾನ ತಂದಿತ್ತು. ಹೈಕೋರ್ಟ್‌ಗಳು ತಮ್ಮ ಕರ್ತವ್ಯ ನಿಭಾಯಿಸದಂತೆ ಏಕೆ ತಡೆಒಡ್ಡಲಾಗುತ್ತಿದೆ? ಎಂದು ಅವರು ಪ್ರಶ್ನಿಸಿದರು.

ಆದರೆ, ‘ದೇಶದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗಳು ನೀಡಿರುವ ಆದೇಶಗಳಿಗೆ ತಾನು ತಡೆ ಒಡ್ಡಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ಶುಕ್ರವಾರ ಸೇವಾ ನಿವೃತ್ತಿ ಹೊಂದುತ್ತಿರುವ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರು ನೇತೃತ್ವ ವಹಿಸಿರುವ ಪೀಠವು, ಕೆಲ ಹಿರಿಯ ವಕೀಲರು ಗುರುವಾರ ತಾನು ಹೊರಡಿಸಿದ ಆದೇಶವನ್ನು ಪೂರ್ಣ ಓದದೆಯೇ ಹೇಳಿಕೆ ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿತು.

ಕೋವಿಡ್‌ ಪರಿಸ್ಥಿತಿಯಲ್ಲಿ ಆಮ್ಲಜನಕ, ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಹಿಂಪಡೆಯಲು ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರಿಗೆ ಅವಕಾಶ ನೀಡಿತು.

‘ಒಂದು ದಿನದ ನೋಟಿಸ್‌ ನೀಡಿ, ಕಡೆಯ ಗಳಿಗೆಯಲ್ಲಿ ಅದೂ ಮುಖ್ಯ ನ್ಯಾಯಮೂರ್ತಿ ಅಧಿಕಾರಾವಧಿಯ ಕಡೆಯ ದಿನ ಮಧ್ಯ ಪ್ರವೇಶಿಸಿದೆ. ಇದು, ಪ್ರಸ್ತುತ ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವ ಯತ್ನಗಳನ್ನು ಅಕ್ಷರಶಃ ಅಸ್ತವ್ಯಸ್ತಗೊಳಿಸಿದೆ. ಹೀಗಾಗಿ, ಸುಪ್ರೀಂಕೋರ್ಟ್‌ ಕ್ರಮ ತಪ್ಪು‘ ಎಂದು ಸಿಂಘ್ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.