ನವದೆಹಲಿ: ಉತ್ತರ ಪ್ರದೇಶದ ಸಂಭಲ್‌ನ ಜಾಮಾ ಮಸೀದಿ ವ್ಯವಸ್ಥಾಪನಾ ಸಮಿತಿಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಸೀದಿ ಪ್ರವೇಶ ದ್ವಾರದಲ್ಲಿರುವ ಬಾವಿಗೆ ಸಂಬಂಧಿಸಿ ಯಥಾಸ್ಥಿತಿ ಕಾಪಾಡುವಂತೆ ಶುಕ್ರವಾರ ಸೂಚಿಸಿದೆ.
ಅಲ್ಲದೇ, ತನ್ನ ಅನುಮತಿ ಇಲ್ಲದೆಯೇ ಬಾವಿ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳಬಾರದು ಹಾಗೂ ಎರಡು ವಾರಗಳ ಒಳಗಾಗಿ ಯಥಾಸ್ಥಿತಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ಮಸೀದಿ ಕುರಿತು ಸಮೀಕ್ಷೆ ನಡೆಸುವಂತೆ ಸಂಭಲ್‌ನ ಸಿವಿಲ್ ನ್ಯಾಯಾಲಯ (ಹಿರಿಯ ವಿಭಾಗ) ನ್ಯಾಯಾಧೀಶರು ಕಳೆದ ವರ್ಷ ನವೆಂಬರ್ 19ರಂದು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಮಸೀದಿ ಸಮಿತಿ ಮೇಲ್ಮನವಿ ಸಲ್ಲಿಸಿದೆ.
‘ಈ ಬಾವಿಗೆ ಐತಿಹಾಸಿಕ ಮಹತ್ವ ಇದೆ. ಬಹಳ ವರ್ಷಗಳಿಂದಲೂ ಇದೇ ಬಾವಿಯ ನೀರನ್ನು ಬಳಸಲಾಗುತ್ತಿದೆ. ಈ ಸ್ಥಳವನ್ನು ‘ಹರಿ ಮಂದಿರ’ ಎಂಬುದಾಗಿ ಉಲ್ಲೇಖಿಸುವ ಹಾಗೂ ಅಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಆರಂಭಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದು ಮಸೀದಿ ಪರ ವಕೀಲ ಹುಜೇಫಾ ಅಹ್ಮದಿ, ಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ‘ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡುವುದಿಲ್ಲ’ ಎಂದರು.
ಹಿಂದೂ ಪರ ವಕೀಲ ವಿಷ್ಣುಶಂಕರ ಜೈನ್,‘ಬಾವಿಯು ಮಸೀದಿ ವ್ಯಾಪ್ತಿಯಿಂದ ಹೊರಗಿದ್ದು, ಇದಕ್ಕೆ ಪೂಜೆ ಮಾಡುತ್ತಿರುವ ಇತಿಹಾಸ ಇದೆ’ ಎಂದು ವಾದಿಸಿದರು.
ಆಗ, ‘ಬಾವಿಯ ಅರ್ಧ ಭಾಗ ಮಸೀದಿ ಆವರಣದೊಳಗೆ, ಮತ್ತೊಂದು ಭಾಗ ಹೊರಗಿದೆ’ ಎಂದ ವಕೀಲ ಅಹ್ಮದಿ, ಗೂಗಲ್ ನಕ್ಷೆಯನ್ನು ಉಲ್ಲೇಖಿಸಿದರು.
ಎರಡೂ ಕಡೆಯವರ ವಾದಗಳನ್ನು ಆಲಿಸಿದ ಪೀಠ, ಯಥಾಸ್ಥಿತಿಗೆ ಆದೇಶಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.