ADVERTISEMENT

ತಮಿಳುನಾಡಿನ ಅರ್ಜಿ ದುರುದ್ದೇಶದ್ದು; ‘ಸುಪ್ರೀಂ’ಗೆ ರಾಜ್ಯದ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 18:35 IST
Last Updated 4 ಜನವರಿ 2019, 18:35 IST
   

ನವದೆಹಲಿ: ಮೇಕೆದಾಟು ಯೋಜನೆಯನ್ನು ಅನಗತ್ಯವಾಗಿ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರವು, ದುರುದ್ದೇಶದಿಂದ ಮೇಲ್ಮನವಿ ಸಲ್ಲಿಸಿದೆ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೋರ್ಟ್‌ ಸೂಚನೆಯ ಮೇರೆಗೆ ಶುಕ್ರವಾರ ಕರ್ನಾಟಕ ಪ್ರತಿಕ್ರಿಯೆ ಸಲ್ಲಿಸಿದೆ. ಸಮುದ್ರಕ್ಕೆ ಹೆಚ್ಚುವರಿಯಾಗಿ ಹರಿದು ಹೋಗುವ ಕಾವೇರಿ ನೀರಿನ ಸದ್ಬಳಕೆಗಾಗಿ ಸಮಾನಾಂತರ ಜಲಾಶಯ ನಿರ್ಮಿಸುವುದನ್ನು ತಡೆಯುವ ದುರುದ್ದೇಶದಿಂದ ತಮಿಳುನಾಡು, ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವುದನ್ನು ವಿರೋಧಿಸುತ್ತಿದೆ ಎಂದು ಪ್ರತಿಕ್ರಿಯೆಯಲ್ಲಿ ದೂರಿದೆ.

ನಿಷ್ಪ್ರಯೋಜಕವಾದ ಸುಳ್ಳು ಅರ್ಜಿ ಸಲ್ಲಿಸುವ ಮೂಲಕ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಮರು ವಿಚಾರಣೆಗೆ ತಮಿಳುನಾಡು ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.

ADVERTISEMENT

ಮೇಕೆದಾಟು ಯೋಜನೆ ಸಾಕಾರಗೊಂಡಲ್ಲಿ ನಿಯಮಿತವಾಗಿ ಹರಿದು ಬರುವ ತನ್ನ ಪಾಲಿನ ಕಾವೇರಿ ನೀರಿನಲ್ಲಿ ಯಾವ ರೀತಿಯ ಕೊರತೆ ಎದುರಾಗಲಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿರುವ ತಮಿಳು ನಾಡಿನ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಕೂಡದು ಎಂದರು.

ಮೇಕೆದಾಟು ಕುರಿತ ಪ್ರಾಥಮಿಕ ಯೋಜನಾ ವರದಿಗೆ ಕಳೆದ ನವೆಂಬರ್‌ 22ರಂದು ಸಮ್ಮತಿ ಸೂಚಿಸಿರುವ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ)ವು, ಡಿಪಿಆರ್‌ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ ಕೂಡಲೇ ಕ್ಯಾತೆ ತೆಗೆದಿರುವ ತಮಿಳುನಾಡು, ವರದಿ ಸಿದ್ಧಪಡಿಸದಂತೆ ಒತ್ತಡ ಹೇರುತ್ತಿದೆ ಎಂದೂ ರಾಜ್ಯ ಸರ್ಕಾರ ಆರೋಪಿಸಿದೆ.

ಸಿಡಬ್ಲ್ಯೂಸಿಯ ಸಮ್ಮತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಟಸ್ಥ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆಯೂ ಕೋರಿರುವ ತಮಿಳುನಾಡು, ಕಣಿವೆ ವ್ಯಾಪ್ತಿಯ ಇತರ ರಾಜ್ಯಗಳಿಗೂ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಮೂರು ಪುಟಗಳ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.