ADVERTISEMENT

ವಕ್ಫ್‌ ತಿದ್ದುಪಡಿ ಕಾಯ್ದೆ: ಕೇಂದ್ರದಿಂದ ಸುಪ್ರೀಂ ಕೋರ್ಟ್‌ಗೆ ಕೇವಿಯಟ್

ಏ.15ರಂದು ವಕ್ಫ್‌ ತಿದ್ದುಪಡಿ ಕಾಯ್ದೆ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಸಾಧ್ಯತೆ

ಪಿಟಿಐ
Published 8 ಏಪ್ರಿಲ್ 2025, 15:44 IST
Last Updated 8 ಏಪ್ರಿಲ್ 2025, 15:44 IST
–
   

ನವದೆಹಲಿ: ವಕ್ಫ್‌ (ತಿದ್ದುಪಡಿ) ಕಾಯ್ದೆ–2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಏಪ್ರಿಲ್‌ 15ರಂದು ನಡೆಸುವ ಸಾಧ್ಯತೆ ಇದೆ.

ಇನ್ನೊಂದೆಡೆ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಕೇವಿಯಟ್‌ ಅರ್ಜಿ ಸಲ್ಲಿಸಿದ್ದು, ಈ ವಿಚಾರವಾಗಿ ಯಾವುದೇ ಆದೇಶ ಹೊರಡಿಸುವುದಕ್ಕೆ ಮುನ್ನ ತನ್ನ ವಾದ ಆಲಿಸುವಂತೆ ಕೋರಿದೆ.

‘ವಕ್ಫ್‌ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಯಾವ ದಿನಾಂಕದಂದು ನಡೆಸಲಾಗುತ್ತದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಮಾಹಿತಿ ಇಲ್ಲ. ಏಪ್ರಿಲ್‌ 15ರ ವಿಚಾರಣೆ ಪಟ್ಟಿಗೆ ಈ ಕುರಿತ ಅರ್ಜಿಗಳನ್ನು ಸೇರಿಸುವ ಸಾಧ್ಯತೆ ಇದೆ’ ಎಂದು ಕೆಲ ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಜಮೀಯತ್ ಉಲಮಾ–ಎ–ಹಿಂದ್‌ ಪರ ವಕೀಲ ಕಪಿಲ್‌ ಸಿಬಲ್‌ ಅವರ ನಿವೇದನೆ ಆಲಿಸಿದ್ದ, ಸಿಜೆಐ ಸಂಜೀವ್‌ ಖನ್ನಾ ನೇತೃತ್ವದ ಪೀಠವು ವಕ್ಫ್‌ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳನ್ನು ವಿಚಾರಣೆ ಪಟ್ಟಿಗೆ ಸೇರಿಸಲು ಪರಿಗಣಿಸಲಾಗುವುದು ಎಂದು ಸೋಮವಾರ ಭರವಸೆ ನೀಡಿತ್ತು.

ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ 10ಕ್ಕೂ ಹೆಚ್ಚು ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ), ಜಮೀಯತ್‌ ಉಲಮಾ–ಎ–ಹಿಂದ್‌ ಸಂಘಟನೆಗಳು ಹಾಗೂ ಡಿಎಂಕೆ ಪಕ್ಷ ಅರ್ಜಿ ಸಲ್ಲಿಸಿವೆ.

ಕಾಂಗ್ರೆಸ್‌ ಸಂಸದರಾದ ಇಮ್ರಾನ್‌ ಪ್ರತಾಪಗಢಿ, ಮೊಹಮ್ಮದ್‌ ಜಾವೇದ್, ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ, ಆರ್‌ಜೆಡಿಯ ಮನೋಜ್‌ ಝಾ ಹಾಗೂ ಫೈಯಾಜ್‌ ಅಹ್ಮದ್‌, ಎಎಪಿಯ ಅಮಾನತ್‌ ಉಲ್ಲಾ ಖಾನ್‌ ಕೂಡ ಮೇಲ್ಕನವಿ ಸಲ್ಲಿಸಿದ್ದಾರೆ.

ಕೇರಳದ ಸುನ್ನಿ ಮುಸ್ಲಿಂ ಧರ್ಮ ಗುರುಗಳು ಹಾಗೂ ವಿದ್ವಾಂಸರನ್ನು ಪ್ರತಿನಿಧಿಸುವ ಸಂಘಟನೆಯಾದ ‘ಸಮಸ್ತ ಕೇರಳ ಜಮೀಯತ್‌ ಉಲ್ ಉಲೇಮಾ’ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದೆ.

ಅಸೋಸಿಯೇಷನ್‌ ಫಾರ್‌ ದಿ ಪ್ರೊಟೆಕ್ಷನ್‌ ಆಫ್‌ ಸಿವಿಲ್ ರೈಟ್ಸ್‌ ಎಂಬ ಎನ್‌ಜಿಒ ಕೂಡ, ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.