ADVERTISEMENT

ಅಪರಾಧಿ ರಾಜಕಾರಣಿಗಳಿಗೆ ಆಜೀವ ನಿಷೇಧ: ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 19:45 IST
Last Updated 1 ನವೆಂಬರ್ 2018, 19:45 IST
   

ನವದೆಹಲಿ: ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದ ರಾಜಕಾರಣಿಗಳು ಜೀವನಪರ್ಯಂತ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ದೆಹಲಿಯ ಬಿಜೆಪಿ ಮುಖಂಡ ಮತ್ತು ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ವಿಚಾರಣೆ ನಡೆಸಿತು.

ಸರ್ಕಾರಿ ನೌಕರಿಯಲ್ಲಿ ಇರುವವರು ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದರೆ ಅವರನ್ನು ಶಾಶ್ವತವಾಗಿ ಕೆಲಸದಿಂದ ಕಿತ್ತು ಹಾಕಲಾಗುತ್ತದೆ.ಆದರೆ, ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 8(3)ರ ಪ್ರಕಾರ, ಅಪರಾಧ ಪ್ರಕರಣದಲ್ಲಿರಾಜಕಾರಣಿಗಳಿಗೆ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಆರು ವರ್ಷ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಲಾಗುತ್ತದೆ. ಸರ್ಕಾರಿ ನೌಕರರಿಗೆ ಅನ್ವಯವಾಗುವ ನಿಯಮವೇ ರಾಜಕಾರಣಿಗಳಿಗೂ ಅನ್ವಯ ಆಗಬೇಕು ಎಂದು ಉಪಾಧ್ಯಾಯ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

ADVERTISEMENT

ಉಪಾಧ್ಯಾಯ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯಬಾರದು ಎಂದು ಪೀಠ ಸೂಚಿಸಿತು. ಅರ್ಜಿಯ ವಿಚಾರಣೆಯನ್ನು ಡಿಸೆಂಬರ್‌ 4ಕ್ಕೆ ನಿಗದಿ ಮಾಡಲಾಗಿದೆ.

ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿಯೇ ದೇಶದಾದ್ಯಂತ 12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಉಪಾಧ್ಯಾಯ ಅವರ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಇತ್ತೀಚೆಗೆ ನಿರ್ದೇಶನ ನೀಡಿತ್ತು.

ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ಅವರುಈ ಪ್ರಕರಣದಲ್ಲಿ ನ್ಯಾಯಾಲಯದ ಸಹಾಯಕರಾಗಿದ್ದಾರೆ. ನ್ಯಾಯಾಲಯಗಳಲ್ಲಿ ನಿರ್ದಿಷ್ಟ ಅವಧಿಯನ್ನು ಚುನಾಯಿತ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳಿಗೆ ಮೀಸಲಿಡುವುದು ಮತ್ತು ಪ್ರತಿ ಜಿಲ್ಲೆಯ ಒಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವನ್ನು ಇಂತಹ ಪ್ರಕರಣಗಳ ವಿಚಾರಣೆಗಾಗಿ ಮೀಸಲಿರಿಸುವುದು ವಿಶೇಷ ನ್ಯಾಯಾಲಯ ಸ್ಥಾಪನೆಗಿಂತ ಉತ್ತಮ ಎಂದು ಹನ್ಸಾರಿಯಾ ಹೇಳಿದರು. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಾದರೆ 70ಕ್ಕೂ ಹೆಚ್ಚು ನ್ಯಾಯಾಲಯಗಳು ಬೇಕಾಗುತ್ತವೆ ಎಂದು ಅವರು ಹಿಂದೆಯೇ ಹೇಳಿದ್ದರು.

ಕೇವಲ 65 ಪ್ರಕರಣಗಳಿವೆ: ಸರ್ಕಾರ

ರಾಜಕಾರಣಿಗಳ ವಿರುದ್ಧದ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವುದಾಗಿ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಹೇಳಿದರು. ರಾಜಕಾರಣಿಗಳ ವಿರುದ್ಧ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ 65ಕ್ಕೂ ಕಡಿಮೆ. ಹಾಗಾಗಿ ಸಾಮಾನ್ಯ ನ್ಯಾಯಾಲಯಗಳಲ್ಲಿಯೇ ವಿಚಾರಣೆ ನಡೆಸಬಹುದು ಎಂಬುದು ಸರ್ಕಾರದ ನಿಲುವು ಎಂದು ಅವರು ಹೇಳಿದರು.

ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌ ಸಂಸ್ಥೆಯ ವರದಿಯ ಪ್ರಕಾರ ಜನಪ್ರತಿನಿಧಿಗಳ ವಿರುದ್ಧ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ 13,680 ಎಂದು ಉಪಾಧ್ಯಾಯ ಅವರು ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.