
ನವದೆಹಲಿ: ರಾಜ್ಯದ ವಕೀಲರ ಸಂಘದ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಇಡೀ ಪ್ರಕ್ರಿಯೆಯ ಮೇಲುಸ್ತುವಾರಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳನ್ನು ನಿಯೋಜಿಸುವ ಕುರಿತು ಸುಪ್ರೀಂ ಕೋರ್ಟ್ ಸುಳಿವು ನೀಡಿದೆ.
‘ಭಾರತೀಯ ವಕೀಲರ ಸಂಘ (ಬಿಸಿಐ), ರಾಜ್ಯ ವಕೀಲರ ಸಂಘದ ಮೇಲೆ ಮೇಲೆ ವಿಶ್ವಾಸದ ಕೊರತೆಯಿದೆ. ಹೀಗಾಗಿ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸ್ವತಂತ್ರ ಚುನಾವಣಾ ಸಮಿತಿ ನೇಮಿಸಲಾಗುವುದು. ಪ್ರತಿ ರಾಜ್ಯವೂ ಮೇಲುಸ್ತುವಾರಿಯನ್ನು ನೇಮಕ ಮಾಡಬೇಕು’ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಜಾಯ್‌ಮಾಲಾ ಬಾಗ್ಚಿ ಅವರ ಪೀಠವು ತಿಳಿಸಿದೆ.
‘ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಿದರೆ, ನಮ್ಮ ಯಾವುದೇ ತಕರಾರು ಇಲ್ಲ’ ಎಂದು ಹಿರಿಯ ನ್ಯಾಯಮೂರ್ತಿ ಹಾಗೂ ಬಿಸಿಐನ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ನ್ಯಾಯಾಲಯದ ಗಮನಸೆಳೆದರು.
‘ರಾಜ್ಯ ವಕೀಲರ ಸಂಘ, ವಕೀಲರ ಪರಿಷತ್‌ಗಳ ಚುನಾವಣೆ ನಡೆಸುವುದು ಭೂಮಿ ಮೇಲಿನ ಅತ್ಯಂತ ಕಷ್ಟದ ಕೆಲಸವಾಗಿದೆ’ ಎಂದು ನ್ಯಾಯಮೂರ್ತಿ ಕಾಂತ್ ತಿಳಿಸಿದರು.
ವಿವಿಧ ರಾಜ್ಯಗಳ ಚುನಾವಣೆ ಅಧಿಸೂಚನೆಯನ್ನು ಆದಷ್ಟು ಬೇಗ ನಡೆಸುವಂತೆ ಮಿಶ್ರಾ ಅವರಿಗೆ ಹೇಳಿದರು.
‘ಪಂಜಾಬ್ ಹಾಗೂ ಹರಿಯಾಣ ವಕೀಲರ ಸಂಘ ಚುನಾವಣೆ ಅಧಿಸೂಚನೆಯನ್ನು ಸೋಮವಾರ ಪ್ರಕಟಿಸಲಾಗುವುದು. ಉಳಿದ ಏಳು ರಾಜ್ಯಗಳ ದಿನಾಂಕವನ್ನು ಈ ವಾರದಲ್ಲೇ ಪ್ರಕಟಿಸಲಾಗುವುದು’ ಎಂದು ಮಿಶ್ರಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.