ADVERTISEMENT

ಮಲ್ಯ ಅರ್ಜಿ ವಿಚಾರಣೆ: ಇ.ಡಿಗೆ ಸುಪ್ರೀಂ ನೋಟಿಸ್‌

ಪಿಟಿಐ
Published 7 ಡಿಸೆಂಬರ್ 2018, 14:21 IST
Last Updated 7 ಡಿಸೆಂಬರ್ 2018, 14:21 IST
ವಿಜಯ ಮಲ್ಯ
ವಿಜಯ ಮಲ್ಯ   

ನವದೆಹಲಿ: ದೇಶ ತೊರೆದ ಆರ್ಥಿಕ ಅಪರಾಧಿ ಎಂದು ಘೋಷಿಸಲು ನಡೆಯುತ್ತಿರುವ ಪ್ರಕ್ರಿಯೆ ವಿರುದ್ಧ ಉದ್ಯಮಿ ವಿಜಯ್‌ ಮಲ್ಯ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಸುಪ್ರೀಂ ಕೋರ್ಟ್‌ ನೊಟೀಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ಮತ್ತು ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರನ್ನೊಳಗೊಂಡ ಪೀಠ, ಅರ್ಜಿಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯ ಪ್ರತಿಕ್ರಿಯೆ ಕೇಳಿದೆ. ಆದರೆ, ಈ ಬಗ್ಗೆ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳಿಗೆ ತಡೆ ನೀಡಲು ನಿರಾಕರಿಸಿದೆ.

ಆರ್ಥಿಕ ಅಪರಾಧಿಗಳ ಕಾಯ್ದೆ 2018ರ ಅಡಿಯಲ್ಲಿ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಲು ಅನುಮತಿ ನೀಡುವಂತೆ ಇ.ಡಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

ADVERTISEMENT

‘ದೇಶ ತೊರೆದ ಆರ್ಥಿಕ ಅಪರಾಧಿ ಎಂದು ಘೋಷಿಸಲು ಹಾಗೂ ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಮನವಿಗೆ ತಡೆ ನೀಡಬೇಕು’ ಎಂಬ ಉದ್ಯಮಿ ವಿಜಯ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಿಜಯ್‌ ಮಲ್ಯ, ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.