ADVERTISEMENT

ಬಾಲಾಜಿ ಜಾಮೀನು ಅರ್ಜಿ: ಇ.ಡಿ ಗೆ ‘ಸುಪ್ರೀಂ’ ನೋಟಿಸ್

ಪಿಟಿಐ
Published 1 ಏಪ್ರಿಲ್ 2024, 16:25 IST
Last Updated 1 ಏಪ್ರಿಲ್ 2024, 16:25 IST
ಸೆಂಥಿಲ್ ಬಾಲಾಜಿ
ಸೆಂಥಿಲ್ ಬಾಲಾಜಿ   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ವರ್ಷ ಬಂಧನಕ್ಕೊಳಗಾಗಿರುವ ತಮಿಳುನಾಡಿನ ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರ ಜಾಮೀನು ಅರ್ಜಿಯ ಕುರಿತು ಜಾರಿ ನಿರ್ದೇಶನಾಲಯದಿಂದ (ಇ.ಡಿ) ಸುಪ್ರೀಂ ಕೋರ್ಟ್ ಸೋಮವಾರ ಪ್ರತಿಕ್ರಿಯೆ ಕೋರಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್‌ ಓಕಾ ಮತ್ತು ಉಜ್ಜಲ್ ಭುಯಾನ್‌ ಅವರನ್ನೊಳಗೊಂಡ ಪೀಠವು ಇ.ಡಿ. ಗೆ ನೋಟಿಸ್ ಜಾರಿ ಮಾಡಿದ್ದು, ಏ. 29ರೊಳಗೆ ಉತ್ತರ ನೀಡುವಂತೆ ನಿರ್ದೇಶನ ನೀಡಿದೆ.

ಮದ್ರಾಸ್‌ ಹೈಕೋರ್ಟ್ ಫೆ. 28ರಂದು ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ, ‘ಈ ರೀತಿಯ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಅದು ತಪ್ಪು ಸಂದೇಶ ನೀಡಲಿದೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿರುತ್ತದೆ’ ಎಂದು ಹೇಳಿತ್ತು.

ADVERTISEMENT

‘ಅರ್ಜಿದಾರರು ಎಂಟು ತಿಂಗಳಿಗಿಂತಲೂ ಹೆಚ್ಚು ಅವಧಿ ಜೈಲಿನಲ್ಲಿದ್ದಾರೆ. ಆದ್ದರಿಂದ, ಒಂದು ಕಾಲಮಿತಿಯೊಳಗೆ ಪ್ರಕರಣವನ್ನು ವಿಲೇವಾರಿ ಮಾಡಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸುವುದು ಹೆಚ್ಚು ಸೂಕ್ತವಾಗಿದೆ. ಈ ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳ ಅವಧಿಯಲ್ಲಿ ಪ್ರಕರಣವನ್ನು ವಿಲೇವಾರಿ ಮಾಡಲು ಚೆನ್ನೈನ ಪ್ರಧಾನ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಆದೇಶಿಸಿತ್ತು.

ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿ ಪ್ರಕಾರ ನಿತ್ಯ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

2023ರ ಜೂನ್‌ 14ರಂದು ಬಾಲಾಜಿಯನ್ನು ಇ.ಡಿ ಬಂಧಿಸಿತ್ತು. ಆ. 12ರಂದು 3 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು. ಅ.19ರಂದು ಹೈಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದಕ್ಕೂ ಮುನ್ನ ಸ್ಥಳೀಯ ನ್ಯಾಯಾಲಯವು ಮೂರು ಬಾರಿ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.