ADVERTISEMENT

ಗೌರಿ ಲಂಕೇಶ್‌ ಹತ್ಯೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 21:53 IST
Last Updated 29 ಜೂನ್ 2021, 21:53 IST
   

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಯ ವಿರುದ್ಧ ದಾಖಲಾಗಿದ್ದ ಆರೋಪಗಳನ್ನು ರದ್ದುಗೊಳಿಸಿರುವ ರಾಜ್ಯ ಹೈಕೋರ್ಟ್‌ನ ಆದೇಶ ಪ್ರಶ್ನಿಸಲಾದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿ ಮೋಹನ್‌ ನಾಯಕ್‌ ವಿರುದ್ಧ ದಾಖಲಾಗಿದ್ದ ಆರೋಪಗಳನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್‌ ಏಪ್ರಿಲ್‌ 22ರಂದು ಆದೇಶ ನೀಡಿತ್ತು.

ಈ ಆದೇಶ ಪ್ರಶ್ನಿಸಿ ಗೌರಿ ಅವರ ಸೋದರಿ ಕವಿತಾ ಲಂಕೇಶ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್‌ ನೇತೃತ್ವದ ಪೀಠವು, ರಾಜ್ಯ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಆರೋಪಿ ಮೋಹನ್‌ ನಾಯಕ್‌ಗೆ ನೋಟಿಸ್‌ ನೀಡಿದ್ದು, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ADVERTISEMENT

ಹೈಕೋರ್ಟ್ ಆದೇಶದ ನಂತರ ಆರೋಪಿಯು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯೂ ಪೂರ್ಣಗೊಂಡಿದೆ. ಆದರೆ, ಇದೀಗ ವಿಚಾರಣೆ ನಡೆದಿರುವ ಪ್ರಕರಣದ ವಿಲೇವಾರಿ ಆಗುವವರೆಗೆ ಆರೋಪಿಗೆ ಜಾಮೀನು ನೀಡಕೂಡದು ಎಂದು ಕವಿತ ಪರ ವಕೀಲರಾದ ಹುಜೇಫಾ ಅಹ್ಮದಿ ಹಾಗೂ ಅಪರ್ಣಾ ಭಟ್‌ ನ್ಯಾಯಪೀಠದೆದುರು ವಾದ ಮಂಡಿಸಿದರು.

ಗೌರಿ ಹತ್ಯೆ ಮಾತ್ರವಲ್ಲದೆ, ಇತರ ಅನೇಕ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿರುವ ಪುಣೆಯ ಅಮೋಲ್ ಕಾಳೆ ನೇತೃತ್ವದ ಗುಂಪಿನಲ್ಲಿ ಮೋಹನ್‌ ನಾಯಕ್‌ ಸದಸ್ಯನಾಗಿದ್ದಾನೆ ಎಂಬುದು ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಸಲ್ಲಿಸಿರುವ ವರದಿಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.

2017ರ ಸೆಪ್ಟೆಂಬರ್‌ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದೆದುರು ಗೌರಿ ಲಂಕೇಶ್‌ ಅವರು ಹತ್ಯೆಗೊಳಗಾಗುವ ಮೊದಲು ಮತ್ತು ನಂತರ ಮೋಹನ್‌ ನಾಯಕ್‌ ಆರೋಪಿಗಳಿಗೆ ಆಶ್ರಯ ದೊರಕಿಸುವಲ್ಲಿ ಸಕ್ರಿಯನಾಗಿದ್ದಲ್ಲದೆ, ಹಲವಾರು ಪಿತೂರಿಗಳಲ್ಲಿ ಭಾಗಿಯಾಗಿದ್ದಾನೆ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.