ADVERTISEMENT

ಕರ್ನಾಟಕ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ‘ಸುಪ್ರೀಂ’

ಡಿಕೆಶಿ ಪತ್ನಿ ಪಾಲುದಾರರಿಂದ ವಶಕ್ಕೆ ಪಡೆದಿದ್ದ ನಗದು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 14:01 IST
Last Updated 5 ಏಪ್ರಿಲ್ 2022, 14:01 IST
   

ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪತ್ನಿಯ ವ್ಯಾಪಾರ ಪಾಲುದಾರ ಕಂಪನಿಯೊಂದರಿಂದ ವಶಪಡಿಸಿಕೊಂಡಿದ್ದ ₹53 ಲಕ್ಷ ನಗದನ್ನು ಮರಳಿಸುವಂತೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

‘ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಹಣದ ಮೂಲ ಖಚಿತವಾಗದ ಹಿನ್ನೆಲೆಯಲ್ಲಿ 2021ರ ಮಾರ್ಚ್‌ 4ರಂದು ಹೈಕೋರ್ಟ್ ಆದೇಶ ನೀಡಿದೆ. ಈ ಸಂಬಂಧ ಮಧ್ಯ ಪ್ರವೇಶಿಸಲು ಆಗದು’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಸಂಜಯ್‌ ಜೈನ್‌ ಅವರು ಹೈಕೋರ್ಟ್‌ನ ಆದೇಶದ ಸಿಂಧುತ್ವ ಪ್ರಶ್ನಿಸಿದರು.

ADVERTISEMENT

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ವೇಳೆ, ವೆಲ್‌ವರ್ತ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಚೇರಿಯಲ್ಲಿ ಹಾಗೂ ಸಚಿನ್ ನಾರಾಯಣ್ ಎಂಬುವವರ ನಿವಾಸದಲ್ಲಿ ಶೋಧ ನಡೆಸಿದಾಗ ಕ್ರಮವಾಗಿ ₹ 47.98 ಲಕ್ಷ ಹಾಗೂ ₹ 5.48 ಲಕ್ಷ ನಗದನ್ನು ಸಿಬಿಐ ವಶಪಡಿಸಿಕೊಂಡಿತ್ತು.

ಮಲ್ಟಿ ಸಿಸ್ಟಮ್ ಆಪರೇಟಿಂಗ್‌ ವ್ಯವಹಾರದ ಭಾಗವಾಗಿ ಸ್ಥಳೀಯ ಕೇಬಲ್ ಆಪರೇಟರ್‌ಗಳಿಂದ ಹಣ ಸಂಗ್ರಹಿಸಲಾಗಿದೆ. ಆ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸುವ ಮೊದಲು ವಶಪಡಿಸಿಕೊಳ್ಳಲಾಗಿದೆ. ಆ ಹಣಕ್ಕೂ, ತನಿಖೆಗೂ ಯಾವುದೇ ಸಂಬಂಧವಿಲ್ಲ ಎಂದು ಕಂಪನಿ ಹೇಳಿತ್ತು.

ಸಚಿನ್‌ ನಾರಾಯಣ್ ಅವರು ಡಿ.ಕೆ.ಶಿವಕುಮಾರ್ ಅವರ ಪತ್ನಿಯೊಂದಿಗೆ ವ್ಯಾಪಾರ ಪಾಲುದಾರರಾಗಿದ್ದಾರೆ ಎಂದು ಸಿಬಿಐ ದೂರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.