ADVERTISEMENT

ಬೇಹುಗಾರಿಕೆ ಪ್ರಕರಣ: ಹೈಕೋರ್ಟ್‌ ಜಾಮೀನು ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 2 ಡಿಸೆಂಬರ್ 2022, 11:20 IST
Last Updated 2 ಡಿಸೆಂಬರ್ 2022, 11:20 IST
 ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌    

ನವದೆಹಲಿ: ಇಸ್ರೊ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್‌ ಅವರನ್ನು ನಕಲಿ ಬೇಹುಗಾರಿಕೆ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿರುವ ಆರೋಪ ಎದುರಿಸುತ್ತಿರುವ ನಾಲ್ವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಕೇರಳ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ರದ್ದುಪಡಿಸಿದೆ.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಿದೆ.

‘ಎಲ್ಲಾ ಮೇಲ್ಮನವಿಗಳನ್ನು ನಾವು ಅಂಗೀಕರಿಸುತ್ತೇವೆ. ಗುಜರಾತ್‌ನ ಈ ಹಿಂದಿನ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಆರ್‌.ಬಿ.ಶ್ರೀಕುಮಾರ್‌, ಕೇರಳದ ಮಾಜಿ ಪೊಲೀಸ್‌ ಅಧಿಕಾರಿಗಳಾದ ಎಸ್‌.ವಿಜಯನ್‌ ಮತ್ತು ತಂಬಿ ಎಸ್‌. ದುರ್ಗಾ ದತ್ತ ಹಾಗೂ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಪಿ.ಎಸ್‌.ಜಯ‍ಪ‍್ರಕಾಶ್‌ ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವ ಹೈಕೋರ್ಟ್‌ ಆದೇಶ ರದ್ದು ಮಾಡಲಾಗುತ್ತದೆ. ನಿರೀಕ್ಷಣಾ ಜಾಮೀನು ಅರ್ಜಿಗಳ ಕುರಿತು ಹೊಸದಾಗಿ ವಿಚಾರಣೆ ನಡೆಸಿ ನಾಲ್ಕು ವಾರಗಳೊಳಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಹೈಕೋರ್ಟ್‌ಗೆ ಸೂಚಿಸಲಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

‘ಹೈಕೋರ್ಟ್‌ ಪೀಠವು ಜಾಮೀನು ಅರ್ಜಿಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿಪ್ರತಿವಾದಿಗಳನ್ನು ಬಂಧಿಸುವಂತಿಲ್ಲ’ ಎಂದೂ ನ್ಯಾಯಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.