ನವದೆಹಲಿ: ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅವಿರೋಧವಾಗಿಆಯ್ಕೆಯಾದ 20,000ಕ್ಕೂ ಹೆಚ್ಚು ಸ್ಥಾನಗಳ ಚುನಾವಣೆ ಫಲಿತಾಂಶ ರದ್ದುಪಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದ್ದು, ಇದರಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಳರಾಗಿದ್ದಾರೆ.
ಪ್ರತಿಸ್ಪರ್ಧಿಗಳು ಇಲ್ಲದ ಹಿನ್ನೆಲೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕೆ ತಡೆಯೊಡ್ಡಲಾಗಿತ್ತು ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಸಿಪಿಐ(ಎಂ) ಆರೋಪಿಸಿದ್ದವು.
ಅಸಮಾಧಾನಗೊಂಡಿರುವ ಅಭ್ಯರ್ಥಿಗಳು ಚುನಾವಣೆಗೆ ಸಂಬಂಧಿಸಿದ ದೂರನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಚುನಾವಣಾ ಸಂಬಂಧಿತ ಪ್ರಕರಣಗಳನ್ನು 30 ದಿನಗಳ ಕಾಲಮಿತಿಯಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಬೇಕು. ಈ ಪ್ರಕರಣದಲ್ಲಿ ಕಾಲಮಿತಿ ಮುಕ್ತಾಯಗೊಂಡಿದ್ದರಿಂದಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ಎ.ಎಂ. ಖನ್‌ವಿಲ್ಕರ್, ಡಿ. ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಸಂವಿಧಾನದ 142 ನೇ ಪರಿಚ್ಛೇದದ ಅಡಿಯಲ್ಲಿ ವಿಶೇಷ ಅಧಿಕಾರಬಳಸಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತು.
ಕಳೆದ ಮೇ ತಿಂಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ58,692 ಸ್ಥಾನಗಳ ಪೈಕಿ 20,159 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಸಿಪಿಐ (ಎಂ) ಹಾಗೂ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.