ADVERTISEMENT

‘ಕ್ಲಾಟ್‌’ ಪರೀಕ್ಷೆ ರದ್ದತಿಗೆ ಸುಪ್ರೀಂ ಕೋರ್ಟ್‌ ನಕಾರ

ಪಿಟಿಐ
Published 9 ಅಕ್ಟೋಬರ್ 2020, 10:55 IST
Last Updated 9 ಅಕ್ಟೋಬರ್ 2020, 10:55 IST
   

ನವದೆಹಲಿ: ಪ್ರಸಕ್ತ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್‌) ರದ್ದು ಮಾಡಲು ಹಾಗೂ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ತಾಂತ್ರಿಕ ತೊಂದರೆಯ ಕಾರಣ ಪರೀಕ್ಷೆಯನ್ನು ರದ್ದು ಮಾಡಬೇಕೆಂದು ಕೋರಿ ಐವರು ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಂ.ಆರ್‌.ಶಾ ನೇತೃತ್ವದ ಪೀಠವು ಶುಕ್ರವಾರ ಇದರ ವಿಚಾರಣೆ ನಡೆಸಿತು.

‘ಅರ್ಜಿದಾರರು ಎರಡು ದಿನಗಳೊಳಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕುಂದು ಕೊರತೆ ಪರಿಹಾರ ಸಮಿತಿಗೆ ದೂರು ಸಲ್ಲಿಸಬೇಕು. ಈ ವಿಷಯದಲ್ಲಿ ಸಮಿತಿಯೇ ಸೂಕ್ತ ತೀರ್ಮಾನ ಕೈಗೊಳ್ಳಲಿದೆ’ ಎಂದು ಪೀಠವು ತಿಳಿಸಿತು.

ADVERTISEMENT

‘ಈ ಬಾರಿ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆದಿದ್ದರಿಂದ ಕೆಲ ತಾಂತ್ರಿಕ ತೊಡಕುಗಳು ಉಂಟಾಗಿವೆ. ಕೆಲ ಪ್ರಶ್ನೆಗಳೇ ತಪ್ಪಾಗಿದ್ದವು. ಈ ಸಂಬಂಧ ಈಗಾಗಲೇ ಸುಮಾರು 40,000 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಈ ಪೈಕಿ ಸುಮಾರು 19,000 ಆಕ್ಷೇಪಣೆಗಳಿಗೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ. ಸಾಫ್ಟ್‌ವೇರ್‌ ಸಮಸ್ಯೆಯಿಂದಾಗಿಯೇ ಇಷ್ಟೆಲ್ಲಾ ಅವಾಂತರಗಳಾಗಿವೆ’ ಎಂದು ಅರ್ಜಿದಾರರ ಪರ ವಕೀಲ ಗೋಪಾಲ ಶಂಕರನಾರಾಯಣನ್‌ ಹೇಳಿದರು.

‘ಪ್ರಶ್ನೆ ಪತ್ರಿಕೆ ಹಾಗೂ ಕೀ ಉತ್ತರಗಳಲ್ಲೂ ಸಾಕಷ್ಟು ತಪ್ಪುಗಳಿವೆ. ಹೀಗಾಗಿ ಇದೇ ಮೊದಲ ಬಾರಿಗೆ ಶೇಕಡ 3ರಷ್ಟು ಅಭ್ಯರ್ಥಿಗಳು ಮಾತ್ರ ಶೇಕಡ 50ರಷ್ಟು ಅಂಕ ಗಳಿಸಿದ್ದಾರೆ’ ಎಂದೂ ಅವರು ಪೀಠಕ್ಕೆ ತಿಳಿಸಿದರು.

‘ಪ್ರಶ್ನೆಪತ್ರಿಕೆಯಲ್ಲಿದ್ದ 146 ಮತ್ತು 150ನೇ ಪ್ರಶ್ನೆಗಳ ಬಗ್ಗೆ ಹೆಚ್ಚು ಆಕ್ಷೇಪ ವ್ಯಕ್ತವಾಗಿತ್ತು. ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ ಎರಡೂ ಪ್ರಶ್ನೆಗಳನ್ನೂ ಕೈಬಿಡಲಾಗಿತ್ತು. ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಬಾಬು ಅವರು ಒಂಬುಡ್ಸ್‌ಮನ್‌ ಆಗಿದ್ದಾರೆ. ಗಂಭೀರ ದೂರುಗಳನ್ನು ಅವರೇ ಪರಿಶೀಲಿಸಲಿದ್ದಾರೆ’ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಪರ ವಕೀಲ ನರಸಿಂಹ ಅವರು ಪೀಠದ ಗಮನಕ್ಕೆ ತಂದರು.

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆಯೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವುಸೆಪ್ಟೆಂಬರ್‌ 28ರಂದು ಪರೀಕ್ಷೆ ಆಯೋಜಿಸಿತ್ತು.

ದೇಶದ ಪ್ರತಿಷ್ಠಿತ 23 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್‌ಎಲ್‌ಯು) ಐದು ವರ್ಷದ ಇಂಟಿಗ್ರೇಟೆಡ್‌ ಕಾನೂನು ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ‘ಕ್ಲಾಟ್‌’ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.