ADVERTISEMENT

ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್‌ 

ಎನ್‌ಪಿಎಗಳ ಪರಿಶೀಲನೆಗೆ ಮಾರ್ಗಸೂಚಿಗಳ ರೂಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 15:03 IST
Last Updated 7 ಅಕ್ಟೋಬರ್ 2021, 15:03 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಬ್ಯಾಂಕಿಂಗ್‌ ವಲಯದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಕಾರ್ಯನಿರ್ವಹಿಸದ ಸ್ವತ್ತುಗಳ (ಎನ್‌ಪಿಎ) ಬಗ್ಗೆ ಪರಿಶೀಲಿಸಲು ಮಾರ್ಗಸೂಚಿಗಳನ್ನು ರೂಪಿಸಲು ಸಮಿತಿ ರಚಿಸುವಂತೆ ಕೋರಿ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿ ಪರಿಗಣಿಸಲು ಸುಪ್ರೀಂಕೋರ್ಟ್‌ ಗುರುವಾರ ನಿರಾಕರಿಸಿದೆ.

ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಸಂಬಂಧಿಸಿದ ನೀತಿಯಾಗಿದ್ದು ಕಾರ್ಯಾಂಗದ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಮಾರ್ಗಸೂಚಿಗಳ ಬದಲಾವಣೆ ಬಗ್ಗೆ ಆರ್‌ಬಿಐ ಮುಂದೆ ಪ್ರಸ್ತಾವ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌, ವಿಕ್ರಂ ನಾಥ್‌ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ಸ್ವಾಮಿಗೆ ಸೂಚಿಸಿತು.

ADVERTISEMENT

‘ನಿರಂತರವಾಗಿ ಹೆಚ್ಚುತ್ತಿರುವ ಎನ್‌ಪಿಎಗಳಿಗೆ ನಾವು ಹೇಗೆ ಮಾರ್ಗಸೂಚಿಗಳನ್ನು ರೂಪಿಸಬಹುದು. ಆರ್‌ಬಿಐ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ನೀಡಿದೆ. ನ್ಯಾಯಾಲಯವು ಕಾರ್ಯಾಂಗದ ಅಧಿಕಾರದಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು.

ಈ ಮುಂಚೆ ವೈಯಕ್ತಿಕವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಸ್ವಾಮಿ ಅವರು, ತಮ್ಮ ಅರ್ಜಿಯು ಬ್ಯಾಂಕಿಂಗ್‌ ವಲಯದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಎನ್‌ಪಿಎಗಳ ಸಮಸ್ಯೆಗಳ ಕುರಿತು ಹೇಳುತ್ತದೆ. ಎನ್‌ಪಿಎಗಳ ಹೆಚ್ಚಳವನ್ನು ಪರಿಶೀಲಿಸಲು ನ್ಯಾಯಾಲಯ ಅಗತ್ಯ ಮಾರ್ಗಸೂಚಿಗಳನ್ನು ಸೂಚಿಸುವ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದ್ದರು.

ಎನ್‌ಪಿಎಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಗೌಪ್ಯತೆಯನ್ನು ಕಾಪಾಡುತ್ತಿದೆ. ಆದ್ದರಿಂದ ನ್ಯಾಯಾಲಯ ಸಮಿತಿ ರಚಿಸಬೇಕು ಎಂದು ಸ್ವಾಮಿ ಕೋರಿದ್ದರು.

ಸರ್ಕಾರ ಮತ್ತು ಆರ್‌ಬಿಐ ಈ ಕುರಿತು ಕಾಲ ಕಾಲಕ್ಕೆ ಮಾರ್ಗಸೂಚಿಗಳನ್ನು ರೂಪಿಸಿವೆ ಎಂದು ಅಭಿಪ್ರಾಯಪಟ್ಟ ಪೀಠ ಅರ್ಜಿಯನ್ನು ವಿಲೇವಾರಿಗೊಳಿಸಿತು.

ಎನ್‌ಪಿಎಗಳಿಗೆ ಸಂಬಂಧಿಸಿ ಮಾರ್ಗಸೂಚಿಗಳನ್ನು ಮಾರ್ಪಾಡು ಮಾಡಲು ಆರ್‌ಬಿಐಗೆ ಪ್ರಸ್ತಾವ ಸಲ್ಲಿಸಲು ಸ್ವಾಮಿ ಅವರಿಗೆ ಸುಪ್ರೀಂಕೋರ್ಟ್‌ ಸಂಪೂರ್ಣ ಸ್ವಾತಂತ್ರ್ಯ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.