ನವದೆಹಲಿ: ‘ರಾಮ ಸೇತು’ವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಸ್ಮಾರಕ ಘೋಷಣೆಯ ಜೊತೆಗೆ ಆ ಸ್ಥಳದ ಸಂರಕ್ಷಣೆಗೆ ಗೋಡೆ ನಿರ್ಮಿಸಬೇಕೆಂದು ಕೋರಿ ಹಿಂದೂ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷ ಅಶೋಕ್ ಪಾಂಡೆ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಸುಧಾಂಶು ಧುಲಿಯಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ‘ಇದು ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹಾಗಾಗಿ, ನ್ಯಾಯಾಲಯವು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿತು.
‘ರಾಮ ಸೇತು’ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವೆಂದು ಘೋಷಿಸುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿ ಇರುವ ಬಗ್ಗೆ ಪಾಂಡೆ, ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ವಿಚಾರಣೆಯು ಬಾಕಿ ಇದ್ದರೂ ಅದರಿಂದ ನಿಮಗೆ ಏನಾಗಬೇಕಿದೆ’ ಎಂದು ಪ್ರಶ್ನಿಸಿತು.
‘ಆ ಸ್ಥಳದ ಸುರಕ್ಷತೆಗಾಗಿ ಗೋಡೆ ನಿರ್ಮಿಸಬೇಕಿದೆ’ ಎಂದು ವಾದಿಸಿದರು.
‘ರಾಮ ಸೇತುವಿನ ಎರಡೂ ಕಡೆಯಲ್ಲಿ ಗೋಡೆ ನಿರ್ಮಾಣ ಸಾಧ್ಯವೇ? ನ್ಯಾಯಾಲಯದಿಂದ ಈ ಕೆಲಸ ಆಗುತ್ತದೆಯೇ, ಅದು ಸರ್ಕಾರದ ಕೆಲಸ’ ಎಂದ ನ್ಯಾಯಪೀಠವು, ಸುಬ್ರಮಣಿಯನ್ ಸ್ವಾಮಿಯ ಅರ್ಜಿಯೊಟ್ಟಿಗೆ ಈ ಅರ್ಜಿಯನ್ನೂ ಪರಿಗಣಿಸಲು ನಿರಾಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.